ADVERTISEMENT

ತಿರಸ್ಕರಿಸುವ ಅಧಿಕಾರವನ್ನು ಯಾವ ರಾಜ್ಯವೂ ಬಳಸಿಲ್ಲ: ತರುಣ್ ಬಜಾಜ್

ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಹೇಳಿಕೆ

ಪಿಟಿಐ
Published 19 ಮೇ 2022, 21:01 IST
Last Updated 19 ಮೇ 2022, 21:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಜಿಎಸ್‌ಟಿ ಮಂಡಳಿಯ ತೀರ್ಮಾನಗಳ ವಿಚಾರವಾಗಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ‘ಒಂದು ದೇಶ ಒಂದು ತೆರಿಗೆ’ ವ್ಯವಸ್ಥೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿಕ್ಕಿಲ್ಲ ಎಂದು ರೆವಿನ್ಯು ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.

ಈಗಿರುವ ಕಾನೂನನ್ನೇ ಕೋರ್ಟ್‌ ಪುನರುಚ್ಚರಿಸಿದೆ. ಈ ಕಾನೂನು ತೆರಿಗೆ ವಿಚಾರವಾಗಿ ಮಂಡಳಿಯ ಶಿಫಾರಸನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡುತ್ತದೆ. ಆದರೆ, ಈ ಅಧಿಕಾರವನ್ನು ಯಾವ ರಾಜ್ಯವೂ ಕಳೆದ ಐದು ವರ್ಷಗಳಲ್ಲಿ ಚಲಾಯಿಸಿಲ್ಲ ಎಂದು ಬಜಾಜ್ ಅವರು ಹೇಳಿದ್ದಾರೆ.

ಜಿಎಸ್‌ಟಿ ಮಂಡಳಿಯ ಶಿಫಾರಸುಗಳು ಸಂವಿಧಾನ ತಿದ್ದುಪಡಿಯ ಪ್ರಕಾರ ಮಾರ್ಗದರ್ಶನದ ಸ್ವರೂಪವನ್ನು ಹೊಂದಿವೆಯೇ ವಿನಾ ಕಡ್ಡಾಯವಾಗಿ ಪಾಲಿಸಬೇಕಾದವು ಅಲ್ಲ ಎಂದೂ ಬಜಾಜ್ ಸ್ಪಷ್ಟಪಡಿಸಿದ್ದಾರೆ.

ADVERTISEMENT

ನಿರ್ದಿಷ್ಟ ಉತ್ಪನ್ನ ಅಥವಾ ಸೇವೆಗೆ ವಿಧಿಸುವ ತೆರಿಗೆ ಪ್ರಮಾಣದ ವಿಚಾರವಾಗಿ ಮಂಡಳಿಯಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರೂ, ಯಾವ ರಾಜ್ಯವೂ ಮಂಡಳಿಯ ಶಿಫಾರಸುಗಳಿಗೆ ಅನುಗುಣವಾಗಿ ಇಲ್ಲದ ರೀತಿಯಲ್ಲಿ ಕಾನೂನು ರೂಪಿಸಿಲ್ಲ.

ಇದು ಮುಂದೆಯೂ ಹೀಗೆಯೇ ಇರುವ ಸಾಧ್ಯತೆ ಇದೆ ಎಂದು ಬಜಾಜ್ ಅವರು ಸುಪ್ರೀಂ ಕೋರ್ಟ್ ತೀರ್ಪಿನ ನಂತರದಲ್ಲಿ ಹೇಳಿದ್ದಾರೆ. ‘ತಾನು ಶಿಫಾರಸು ಮಾಡುತ್ತೇನೆ ಎಂದು ಜಿಎಸ್‌ಟಿ ಕಾನೂನು ಹೇಳುತ್ತದೆ. ತಾನು ಕಡ್ಡಾಯಗೊಳಿಸುತ್ತಿದ್ದೇನೆ ಎಂದು ಅದು ಎಲ್ಲಿಯೂ ಹೇಳುವುದಿಲ್ಲ. ಜಿಎಸ್‌ಟಿ ಮಂಡಳಿ ಸಾಂವಿಧಾನಿಕ ಸಂಸ್ಥೆ. ಅದರ ಶಿಫಾರಸುಗಳನ್ನು ಆಧರಿಸಿ ನಾವು ಜಿಎಸ್‌ಟಿ ಕುರಿತ ಕಾನೂನು ರೂಪಿಸಿದ್ದೇವೆ. ವ್ಯವಸ್ಥೆ ಈ ರೀತಿಯಲ್ಲಿದೆ’ ಎಂದು ಬಜಾಜ್ ವಿವರಿಸಿದ್ದಾರೆ.

‘ರಾಜ್ಯಗಳು ಒಪ್ಪಿಕೊಳ್ಳದೆ ಇದ್ದ ಸಂದರ್ಭದಲ್ಲಿ, ತಮ್ಮ ಒಪ್ಪಿಗೆ ಇಲ್ಲ ಎಂಬುದನ್ನು ಲಿಖಿತವಾಗಿ ಸಲ್ಲಿಸಿದರೂ ಅವು ಶಿಫಾರಸುಗಳನ್ನು ಮಂಡಳಿ ಹೇಳಿದ ರೀತಿಯಲ್ಲಿಯೇ ಅನುಷ್ಠಾನಕ್ಕೆ ತಂದಿವೆ. ತಾವು ಬಯಸಿದ ರೀತಿಯಲ್ಲಿ ಅನುಷ್ಠಾನಗೊಳಿಸಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.