ನವದೆಹಲಿ : ಗೀತಾಂಜಲಿ ಜೆಮ್ಸ್ ಕಂಪನಿಯ ಷೇರುಗಳ ಅಕ್ರಮ ವಹಿವಾಟಿಗೆ ಸಂಬಂಧಿಸಿದ ಪ್ರಕರಣದಲ್ಲಿ ₹2.1 ಕೋಟಿ ಪಾವತಿಸುವಂತೆ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಗೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ನೋಟಿಸ್ ನೀಡಿದೆ.
ಚೋಕ್ಸಿ, ಗೀತಾಂಜಲಿ ಜೆಮ್ಸ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಮೇ 15ರಂದು ಸೆಬಿ, ಹೊಸ ನೋಟಿಸ್ ಜಾರಿಗೊಳಿಸಿದೆ. 15 ದಿನದೊಳಗೆ ₹2.1 ಕೋಟಿ ಪಾವತಿಸಬೇಕು. ಇದು ₹1.5 ಕೋಟಿ ದಂಡ ಮತ್ತು ₹60 ಲಕ್ಷ ಬಡ್ಡಿ ಒಳಗೊಂಡಿದೆ. ಬಾಕಿ ಪಾವತಿಸದಿದ್ದಲ್ಲಿ, ಅವರ ಆಸ್ತಿಗಳನ್ನು ಮಾರಾಟ ಮಾಡುವ ಮೂಲಕ ಮೊತ್ತವನ್ನು ವಸೂಲಿ ಮಾಡುವುದಾಗಿ ಸೆಬಿ ತಿಳಿಸಿದೆ.
ಕಂಪನಿಯ ಷೇರುಗಳ ಮಾರಾಟದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ 2022ರಲ್ಲಿ ಸೆಬಿ ₹1.5 ಕೋಟಿ ದಂಡ ವಿಧಿಸಿತ್ತು. ಆದರೆ, ಚೋಕ್ಸಿ ಪಾವತಿಸುವಲ್ಲಿ ವಿಫಲರಾಗಿದ್ದರು.
ಚೋಕ್ಸಿ ಅವರು ನೀರವ್ ಮೋದಿ ಅವರ ಸಂಬಂಧಿಯಾಗಿದ್ದು, ಇಬ್ಬರೂ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ₹14 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತ
ವನ್ನು ವಂಚಿಸಿರುವ ಆರೋಪ ಎದುರಿಸುತ್ತಿದ್ದಾರೆ. ಕಳೆದ ತಿಂಗಳು ಬೆಲ್ಜಿಯಂನಲ್ಲಿ ಚೋಕ್ಸಿಯನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.