ADVERTISEMENT

ಪೇಟೆ ವಹಿವಾಟು 2 ತಿಂಗಳ ಕನಿಷ್ಠ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 19:35 IST
Last Updated 22 ಜುಲೈ 2019, 19:35 IST
   

ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳಲ್ಲಿ ಸೋಮವಾರ ಮಾರಾಟದ ಒತ್ತಡ ಕಂಡುಬಂದು ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 306 ಅಂಶ ಕುಸಿತ ಕಂಡು ಎರಡು ತಿಂಗಳ ಕನಿಷ್ಠ ಮಟ್ಟವಾದ 38,031 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ73 ಅಂಶ ಇಳಿಕೆಯಾಗಿ ಎರಡು ತಿಂಗಳ ಕನಿಷ್ಠ ಮಟ್ಟವಾದ 11,346 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ADVERTISEMENT

ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು ಮತ್ತು ರೂಪಾಯಿ ಮೌಲ್ಯ ಇಳಿಕೆಯಿಂದಾಗಿ ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ನಡೆಯಿತು ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ನಷ್ಟ: ದಿನದ ವಹಿವಾಟಿನಲ್ಲಿ ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಕ್ರಮವಾಗಿ ಶೇ 5.09 ಮತ್ತು ಶೇ 3.32ರಷ್ಟು ಹೆಚ್ಚಿನ ನಷ್ಟ ಕಂಡವು.

ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕ್‌ನ ವಸೂಲಾಗದ ಸಾಲದ ಪ್ರಮಾಣ ಹೆಚ್ಚಾಗಿದೆ. ಇದರಿಂದ ಷೇರುಗಳ ಮೌಲ್ಯ ಇಳಿಕೆ ಕಂಡಿದೆ.

‘ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತು ಮಾರುಕಟ್ಟೆ ನಿರೀಕ್ಷೆಯಂತೆ ಕಾರ್ಪೊರೇಟ್‌ ಫಲಿತಾಂಶಗಳು ಪ್ರಕಟ
ವಾಗದೇ ಇರುವುದರಿಂದ ಮಾರಾಟದ ಒತ್ತಡ ಕಂಡುಬಂದಿದೆ. ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ತೆರಿಗೆ ಹೊರೆಯ ಆತಂಕದಿಂದ ವಿದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆ ಕಡಿಮೆಯಾಗುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಕುಂದಿದ ಉತ್ಸಾಹ

ಪ್ರಸಕ್ತ ಸಾಲಿನ ಬಜೆಟ್‌ ಮಂಡನೆ ನಂತರ ದೇಶಿ ಷೇರುಪೇಟೆಗಳಲ್ಲಿ ಖರೀದಿ ಉತ್ಸಾಹ ನಿರಂತರವಾಗಿ ಕುಗ್ಗುತ್ತಿದೆ.

ಅತಿ ಶ್ರೀಮಂತರು ಪಾವತಿಸುವ ತೆರಿಗೆ ಮೇಲಿನ ಸರ್ಚಾರ್ಜ್‌ ಹೆಚ್ಚಳವು ಪೇಟೆ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಮಾರುಕಟ್ಟೆಯಲ್ಲಿನ ಖರೀದಿ ಉತ್ಸಾಹ ಎಂಟು ವರ್ಷಗಳ ಹಿಂದಿನ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಬಜೆಟ್‌ ನಂತರ ಇದುವರೆಗೆ ನಡೆದಿರುವ 12 ವಹಿವಾಟಿನ ದಿನಗಳಲ್ಲಿ ಕೇವಲ 3 ದಿನ ಮಾತ್ರ ಪೇಟೆಯು ಸಕಾರಾತ್ಮಕವಾಗಿ ಸ್ಪಂದಿಸಿದೆ.

2008ರಲ್ಲಿ ಅಮೆರಿಕದಲ್ಲಿ ಉಂಟಾಗಿದ್ದ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ಪೇಟೆಯಲ್ಲಿನ ಉತ್ಸಾಹ ಗಮನಾರ್ಹ ಮಟ್ಟದಲ್ಲಿ ಕುಸಿತಗೊಂಡಿತ್ತು. ಸೂಚ್ಯಂಕ ಇನ್ನಷ್ಟು ಕುಸಿತದ ಹಾದಿಯಲ್ಲಿ ಸಾಗಲಿದೆ. ಅಂದು ಸಾಮಾನ್ಯ ಹೂಡಿಕೆದಾರರು ಷೇರುಗಳ ಮಾರಾಟಕ್ಕೆ ಆದ್ಯತೆ ನೀಡಿದ್ದರು. ಈಗ ಸಿರಿವಂತರು ಮಾರಾಟಕ್ಕೆ ಮುಗಿಬಿದ್ದಿದ್ದಾರೆ ಎಂದು ಮಾರುಕಟ್ಟೆ ಪರಿಣತರು ವಿಶ್ಲೇಷಿಸಿದ್ದಾರೆ.

ನರೇಂದ್ರ ಮೋದಿ ಅವರ 2.0 ಸರ್ಕಾರದ ಮೊದಲ 50 ದಿನಗಳಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ₹ 9.68 ಲಕ್ಷ ಕೋಟಿ ಮೊತ್ತದ ಸಂಪತ್ತು ಕರಗಿದೆ. ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ಪೇಟೆಯ ಒಟ್ಟಾರೆ ಮೌಲ್ಯ ₹ 154.4 ಲಕ್ಷ ಕೋಟಿಗಳಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.