ADVERTISEMENT

ಕೋವಿಡ್‌ ಹೆಚ್ಚಳ: ಷೇರುಪೇಟೆ ಸೂಚ್ಯಂಕ ಕುಸಿತ

ಪಿಟಿಐ
Published 29 ಜೂನ್ 2020, 11:45 IST
Last Updated 29 ಜೂನ್ 2020, 11:45 IST
-
-   

ಮುಂಬೈ: ವಿಶ್ವದಾದ್ಯಂತ ಕೊರೊನಾ ವೈರಾಣು ಸೋಂಕಿತರ ಸಂಖ್ಯೆಯಲ್ಲಿನ ಹೆಚ್ಚಳವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿರುವುದು ಸೋಮವಾರದ ಷೇರುಪೇಟೆಯ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು.

ಬ್ಯಾಂಕ್‌ ಮತ್ತು ಐ.ಟಿ ಷೇರುಗಳಲ್ಲಿನ ಮಾರಾಟ ಒತ್ತಡದಿಂದಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 210 ಅಂಶ ಕುಸಿತ ಕಂಡಿತು. ದಿನದ ವಹಿವಾಟಿನಲ್ಲಿ 509 ಅಂಶಗಳಿಗೆ ಎರವಾಗಿದ್ದ ಸೂಚ್ಯಂಕವು ಅಂತ್ಯದಲ್ಲಿ ಕೆಲಮಟ್ಟಿಗೆ ನಷ್ಟ ಭರ್ತಿ ಮಾಡಿಕೊಂಡು 34,961 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಎನ್‌ಸಿಇ ನಿಫ್ಟಿ ಕೂಡ 70 ಅಂಶ ಕಳೆದುಕೊಂಡು 10,312 ಅಂಶಗಳಿಗೆ ತಲುಪಿತು.

ಆ್ಯಕ್ಸಿಸ್‌ ಬ್ಯಾಂಕ್‌ ಗರಿಷ್ಠ ನಷ್ಟ (ಶೇ 5 ) ಕಂಡಿತು. ನಂತರದ ಸ್ಥಾನದಲ್ಲಿ ಟೆಕ್‌ ಮಹೀಂದ್ರಾ, ಎಸ್‌ಬಿಐ, ಎಲ್‌ಆ್ಯಂಡ್‌ಟಿ, ಇಂಡಸ್‌ಇಂಡ್‌ ಬ್ಯಾಂಕ್‌, ಇನ್ಫೊಸಿಸ್‌ ಮತ್ತು ಎನ್‌ಟಿಪಿಸಿ ಷೇರುಗಳು ನಷ್ಟ ದಾಖಲಿಸಿದವು.

ADVERTISEMENT

ಎಚ್‌ಡಿಎಫ್‌ಸಿ ಬ್ಯಾಂಕ್‌, ಎಚ್‌ಯುಎಲ್‌, ಕೋಟಕ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌ ಲಾಭ ಮಾಡಿಕೊಂಡವು.

ಕೋವಿಡ್‌ ಸಾವಿನ ಪ್ರಕರಣಗಳಲ್ಲಿನ ಹೆಚ್ಚಳವು ಆರ್ಥಿಕ ಚಟುವಟಿಕೆಗಳ ಪುನಶ್ಚೇತನಕ್ಕೆ ಅಡ್ಡಿಪಡಿಸಲಿವೆ ಎನ್ನುವ ಕಳವಳವು ಹೂಡಿಕೆದಾರರಲ್ಲಿ ಮನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.