
ನವದೆಹಲಿ: ದೇಶದ ಷೇರುಪೇಟೆಗಳಲ್ಲಿ ಹಣ ಹೂಡಿಕೆ ಮಾಡಿದವರು 2025ರಲ್ಲಿ ಒಟ್ಟು ₹30.20 ಲಕ್ಷ ಕೋಟಿ ಲಾಭ ಕಂಡಿದ್ದಾರೆ. ಹತ್ತು ಹಲವು ಸವಾಲುಗಳನ್ನು ಎದುರಿಸಿಯೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಈ ವರ್ಷದಲ್ಲಿ ಶೇಕಡ 8ರಷ್ಟಕ್ಕಿಂತ ಹೆಚ್ಚು ಲಾಭ ತಂದುಕೊಟ್ಟಿದೆ.
ದೇಶದ ಅರ್ಥವ್ಯವಸ್ಥೆಯಲ್ಲಿನ ಸ್ಥಿರತೆ ಹಾಗೂ ದೇಶಿ ಹೂಡಿಕೆದಾರರು ಷೇರುಪೇಟೆಗಳಿಗೆ ಆಸರೆಯಾಗಿ ನಿಂತಿದ್ದುದು ಗಳಿಕೆಗೆ ಪೂರಕವಾಗಿ ಒದಗಿಬಂದಿವೆ ಎಂದು ತಜ್ಞರು ಹೇಳಿದ್ದಾರೆ.
ಈ ವರ್ಷದ ಡಿಸೆಂಬರ್ 29ರವರೆಗೆ ಸೆನ್ಸೆಕ್ಸ್ 6,556 ಅಂಶ (ಶೇ 8.39ರಷ್ಟು) ಏರಿಕೆ ಕಂಡಿದೆ. ಬಿಎಸ್‌ಇ ನೋಂದಾಯಿತ ಕಂಪನಿಗಳ ಮಾರುಕಟ್ಟೆ ಬಂಡವಾಳದ ಮೊತ್ತವು ₹30,20,367 ಕೋಟಿಯಷ್ಟು ಹೆಚ್ಚಾಗಿದ್ದು ₹472 ಲಕ್ಷ ಕೋಟಿಗೆ ತಲುಪಿದೆ.
ಹಲವು ವರ್ಷಗಳಿಂದ ಎರಡು ಅಂಕಿಗಳ ವಾರ್ಷಿಕ ಲಾಭ ನೀಡುತ್ತಿದ್ದ ಸೂಚ್ಯಂಕಗಳು ಈ ವರ್ಷದಲ್ಲಿ ಮಧ್ಯಮ ಪ್ರಮಾಣದ ಲಾಭ ನೀಡಿವೆ. ಇದು ಕಡಿಮೆ ಅನ್ನಿಸಬಹುದಾದರೂ, ಜಾಗತಿಕ ಸವಾಲುಗಳು, ವಿದೇಶಿ ಹೂಡಿಕೆ ಹೊರಹರಿವಿನ ನಡುವೆ ಈ ಪ್ರಮಾಣದ ಲಾಭ ಆಗಿದೆ ಎಂಬುದನ್ನು ಗಮನಿಸಬೇಕು ಎಂದು ಎನ್ರಿಚ್ ಮನಿ ಸಂಸ್ಥೆಯ ಸಿಇಒ ಪೊನ್ಮುಡಿ ಆರ್. ಹೇಳಿದ್ದಾರೆ.
2025ರಲ್ಲಿ ವಿದೇಶಿ ಹೂಡಿಕೆದಾರರು ದೇಶದ ಷೇರುಪೇಟೆಗಳಿಂದ ಒಟ್ಟು ₹1.6 ಲಕ್ಷ ಕೋಟಿ ಹಣ ಹಿಂಪಡೆದಿದ್ದಾರೆ.
‘2020ರಿಂದ 2024ರ ನಡುವಿನ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಪ್ರಮಾಣದ ಲಾಭ ಸಿಕ್ಕಿತ್ತು. ಆದರೆ 2025ರಲ್ಲಿ ಅಷ್ಟೇನೂ ದೊಡ್ಡ ಮಟ್ಟದ ಲಾಭ ಬಂದಿಲ್ಲ. ಷೇರುಪೇಟೆಯ ಕೆಲವು ವಲಯಗಳ ಮೌಲ್ಯವು ದುಬಾರಿ ಆಗಿತ್ತು... ಕಂಪನಿಗಳ ವರಮಾನದಲ್ಲಿ ದೊಡ್ಡ ಮಟ್ಟದ ಹೆಚ್ಚಳವೇನೂ ಕಾಣಲಿಲ್ಲ. ಜಾಗತಿಕ ಮಟ್ಟದಲ್ಲಿ ಅನಿಶ್ಚಿತತೆಗಳು ಹೆಚ್ಚಾಗಿದ್ದವು. ಇವೆಲ್ಲವೂ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾರುಕಟ್ಟೆ ಕುಸಿಯಲು ಕಾರವಾದವು. ನಂತರ ಏಪ್ರಿಲ್‌ನಿಂದೀಚೆಗೆ ದೊಡ್ಡ ಗಾತ್ರದ ಕಂಪನಿಗಳ ಷೇರುಮೌಲ್ಯವು ನಿಧಾನವಾಗಿ ಚೇತರಿಸಿಕೊಂಡಿದೆ’ ಎಂದು ಎಸ್‌ಬಿಐ ಸೆಕ್ಯುರಿಟೀಸ್‌ನ ಹಿರಿಯ ಅಧಿಕಾರಿ ಸನ್ನಿ ಅಗರ್ವಾಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.