ADVERTISEMENT

ಸೆನ್ಸೆಕ್ಸ್‌ 548 ಅಂಶ ಜಿಗಿತ- ಐ.ಟಿ. ಮತ್ತು ಬ್ಯಾಂಕಿಂಗ್ ಷೇರು ಮೌಲ್ಯ ಹೆಚ್ಚಳ

ಪಿಟಿಐ
Published 27 ಜುಲೈ 2022, 14:34 IST
Last Updated 27 ಜುಲೈ 2022, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳು ಎರಡು ದಿನಗಳ ಕುಸಿತದಿಂದ ಗುರುವಾರ ಹೊರಬಂದವು. ಯುರೋಪಿನ ಮಾರುಕಟ್ಟೆಗಳಲ್ಲಿನ ಸಕಾರಾತ್ಮಕ ವಹಿವಾಟಿನಿಂದ ಪ್ರೇರಿತರಾಗಿ ಹೂಡಿಕೆದಾರರು ಐ.ಟಿ. ಮತ್ತು ಬ್ಯಾಂಕಿಂಗ್ ವಲಯದ ಷೇರುಗಳನ್ನು ಹೆಚ್ಚು ಖರೀದಿಸಿದರು. ಇದರಿಂದಾಗಿ ಸೂಚ್ಯಂಕಗಳು ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 548 ಅಂಶ ಏರಿಕೆ ಕಂಡು 55,816 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 158 ಅಂಶ ಹೆಚ್ಚಾಗಿ 16,642 ಅಂಶಗಳಿಗೆ ಏರಿಕೆ ಆಯಿತು. ಸೆನ್ಸೆಕ್ಸ್‌ನಲ್ಲಿ ಸನ್‌ ಫಾರ್ಮಾ ಷೇರು ಮೌಲ್ಯ ಶೇ 3.39ರಷ್ಟು ಗರಿಷ್ಠ ಏರಿಕೆ ಕಂಡಿತು.

ಏಷ್ಯನ್‌ ಪೇಂಟ್ಸ್‌, ಎಲ್‌ಆ್ಯಂಡ್‌ಟಿ, ಮಾರುತಿ ಮತ್ತು ಟಾಟಾ ಸ್ಟೀಲ್‌ ಕಂಪನಿಗಳ ಜೂನ್‌ ತ್ರೈಮಾಸಿಕದ ಫಲಿತಾಂಶವು ಉತ್ತಮವಾಗಿರುವುದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ ಎಂದು ಮೋತಿಲಾಲ್‌ ಓಸ್ವಾಲ್ ಫೈನಾನ್ಶಿಯಲ್‌ ಸರ್ವಿಸಸ್‌ ಲಿಮಿಟೆಡ್‌ನ ರಿಟೇಲ್‌ ರಿಸರ್ಚ್‌ನ ಮುಖ್ಯಸ್ಥ ಸಿದ್ದಾರ್ಥ್‌ ಖೇಮ್ಕಾ ಹೇಳಿದ್ದಾರೆ.

ADVERTISEMENT

‘ಅಮೆರಿಕದ ಫೆಡರಲ್‌ ರಿಸರ್ವ್‌ ಹಣದುಬ್ಬರ ನಿಯಂತ್ರಿಸಲು ಬಡ್ಡಿದರವನ್ನು ಶೇ 0.75ರಷ್ಟು ಏರಿಕೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಎಲ್ಲರೂ ಅತ್ತ ಗಮನ ಹರಿಸಿದ್ದಾರೆ. ಬಡ್ಡಿದರದ ಕುರಿತು ಮುಂಬರುವ ದಿನಗಳಲ್ಲಿ ಫೆಡರಲ್‌ ರಿಸರ್ವ್‌ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದರ ಮೇಲೆ ಮಾರುಕಟ್ಟೆಯ ದಿಕ್ಕು ನಿರ್ಧಾರವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.53ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 105 ಡಾಲರ್‌ಗೆ ತಲುಪಿದೆ.

=

ದಿನದ ಗಳಿಕೆ (%)

ಸನ್‌ ಫಾರ್ಮಾ;3.39

ಎಲ್‌ಆ್ಯಂಡ್‌ಟಿ;2.76

ಎಸ್‌ಬಿಐ;2.67

ಟಿಸಿಎಸ್‌;2.33

ಏಷ್ಯನ್ ಪೇಂಟ್ಸ್‌;2.31

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.