ADVERTISEMENT

ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು; ಸೆನ್ಸೆಕ್ಸ್‌ 611 ಅಂಶ ಏರಿಕೆ

ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟು

ಪಿಟಿಐ
Published 22 ಡಿಸೆಂಬರ್ 2021, 17:22 IST
Last Updated 22 ಡಿಸೆಂಬರ್ 2021, 17:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ಎರಡನೇ ದಿನವೂ ಸಕಾರಾತ್ಮಕ ವಹಿವಾಟು ನಡೆಯಿತು. ಓಮೈಕ್ರಾನ್‌ ಆತಂಕದ ನಡುವೆಯೇ ಜಾಗತಿಕ ಷೇರುಪೇಟೆಗಳಲ್ಲಿ ವಹಿವಾಟು ಚೇತರಿಕೆ ಕಂಡುಕೊಂಡಿದ್ದು ದೇಶಿ ಷೇರುಪೇಟೆಗಳ ಮೇಲೆಯೂ ಪ್ರಭಾವ ಬೀರಿತು.

ಸತತ ಐದನೇ ದಿನವೂ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ಚೇತರಿಕೆ ಕಂಡಿರುವುದು ಷೇರುಪೇಟೆಗೆ ಇನ್ನಷ್ಟು ಉತ್ತೇಜನ ನೀಡಿತು ಎಂದು ವರ್ತಕರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 611 ಅಂಶ ಏರಿಕೆ ಕಂಡು 56,930 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 185 ಅಂಶ ಹೆಚ್ಚಾಗಿ 16,955 ಅಂಶಗಳಲ್ಲಿ ವಹಿವಾಟು ಅಂತ್ಯಗೊಳಿಸಿತು.

ADVERTISEMENT

ಸೆನ್ಸೆಕ್ಸ್‌ನಲ್ಲಿ ಬಜಾಜ್‌ ಫೈನಾನ್ಸ್‌ ಷೇರು ಮೌಲ್ಯ ಶೇಕಡ 2.94ರಷ್ಟು ಗರಿಷ್ಠ ಏರಿಕೆ ಕಂಡಿತು. ಭಾರ್ತಿ ಏರ್‌ಟೆಲ್‌, ಸನ್‌ ಫಾರ್ಮಾ, ರಿಲಯನ್ಸ್‌ ಇಂಡಸ್ಟ್ರೀಸ್‌, ಎಸ್‌ಬಿಐ, ಎಲ್‌ಆ್ಯಂಡ್‌ಟಿ ಮತ್ತು ಟಾಟಾ ಸ್ಟೀಲ್‌ ಕಂಪನಿಗಳ ಷೇರು ಮೌಲ್ಯವೂ ಹೆಚ್ಚಾಗಿದೆ. ಬಿಎಸ್‌ಇ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ ಸೂಚ್ಯಂಕಗಳು ಶೇ 1.66ರವರೆಗೂ ಏರಿಕೆ ಕಂಡವು.

ಜಾಗತಿಕ ಷೇರುಪೇಟೆಗಳ ಸಕಾರಾತ್ಮಕ ಚಲನೆಯಿಂದಾಗಿ ದೇಶಿ ಷೇರುಪೇಟೆಗಳು ಗಳಿಕೆ ಕಂಡಿವೆ. ಓಮೈಕ್ರಾನ್‌ ಹರಡುವಿಕೆ ಮತ್ತು ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವು ಹೂಡಿಕೆದಾರರನ್ನು ಎಚ್ಚರಿಕೆಯಿಂದ ವಹಿವಾಟು ನಡೆಸುವಂತೆ ಮಾಡಿದೆ. ಮಾರುಕಟ್ಟೆಯಲ್ಲಿ ಆತುರದ ವಹಿವಾಟು ನಡೆಸುವ ಬದಲಾಗಿ ಬಹಳ ಎಚ್ಚರಿಕೆಯಿಂದ ಬೆಳವಣಿಗೆ ಆಧಾರಿತ ವಲಯಗಳ ಆಯ್ದ ಷೇರುಗಳನ್ನು ಮಾತ್ರವೇ ಆರಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯವು ಏರಿಕೆ ಕಂಡು, ಬುಧವಾರದ ವಹಿವಾಟಿನಲ್ಲಿ 5 ಪೈಸೆ ಹೆಚ್ಚಾಗಿ, ಒಂದು ಡಾಲರ್‌ಗೆ ₹ 75.54ರಂತೆ ವಿನಿಮಯಗೊಂಡಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಶೇ 0.38ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 74.24 ಡಾಲರ್‌ಗಳಿಗೆ ತಲುಪಿದೆ.

ಹೂಡಿಕೆದಾರರ ಸಂಪತ್ತು ವೃದ್ಧಿ: ಎರಡು ದಿನಗಳ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 6.56 ಲಕ್ಷ ಕೋಟಿಯಷ್ಟು ವೃದ್ಧಿಯಾಗಿದೆ. ಇದರಿಂದ ಷೇರುಪೇಟೆಯ ಒಟ್ಟಾರೆ ಸಂಪತ್ತು ಮೌಲ್ಯವು ₹ 259.14 ಲಕ್ಷ ಕೋಟಿಗೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.