ADVERTISEMENT

ಷೇರುಪೇಟೆಯಲ್ಲಿ ಖರೀದಿ ಭರಾಟೆ

ಪಿಟಿಐ
Published 13 ಜುಲೈ 2021, 15:19 IST
Last Updated 13 ಜುಲೈ 2021, 15:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಆರು ವಾರಗಳ ಬಳಿಕ ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ಉತ್ತಮ ವಹಿವಾಟು ನಡೆಯಿತು. ಹೂಡಿಕೆದಾರರು ಹಣಕಾಸು ವಲಯದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು ಈ ವಹಿವಾಟಿಗೆ ಕಾರಣವಾಯಿತು.

ಆರ್ಥಿಕ ಅಂಕಿ–ಅಂಶಗಳು ಅನುಕೂಲಕರವಾಗಿರುವ ಜೊತೆಗೆ ಏಷ್ಯಾದ ಮಾರುಕಟ್ಟೆಗಳಲ್ಲಿ ನಡೆದ ಉತ್ತಮ ವಹಿವಾಟಿನ ಕಾರಣಗಳಿಂದಾಗಿ ದೇಶಿ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯಿತು. ಚೀನಾದ ಆರ್ಥಿಕ ಬೆಳವಣಿಗೆಯ ಅಂಕಿ–ಅಂಶವು ನಿರೀಕ್ಷೆಗಿಂತಲೂ ಉತ್ತಮವಾಗಿದೆ. ಚೀನಾದ ತಂತ್ರಜ್ಞಾನ ಷೇರುಗಳು ಮತ್ತೆ ಚೇತರಿಕೆ ಕಂಡಿದ್ದು ಏಷ್ಯಾದ ಷೇರುಪೇಟೆ ಸೂಚ್ಯಂಕಗಳ ಏರಿಕೆಗೆ ಕಾರಣವಾದವು ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಜೂನ್‌ ತಿಂಗಳ ಗ್ರಾಹಕ ದರ ಸೂಚ್ಯಂಕ ಆಧರಿಸಿದ ಹಣದುಬ್ಬರವು ಆರ್‌ಬಿಐನ ಹಿತಕರ ಮಟ್ಟಕ್ಕಿಂತ ಹೆಚ್ಚಿಗೆ ಇದ್ದರೂ ಮೇ ತಿಂಗಳಿನಲ್ಲಿ ಇದ್ದ ಶೇಕಡ 6.30ಗೆ ಹೋಲಿಸಿದರೆ, ಈಗ ಶೇ 6.26ಕ್ಕೆ ಇಳಿಕೆ ಕಂಡಿದೆ. ಇದು ಮಾರುಕಟ್ಟೆಗೆ ತುಸು ಸಮಾಧಾನ ತಂದುಕೊಟ್ಟಿತು ಎಂದು ಅವರು ತಿಳಿಸಿದ್ದಾರೆ.

ADVERTISEMENT

ದಿನದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 397 ಅಂಶ ಏರಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 120 ಅಂಶ ಹೆಚ್ಚಾಗಿದೆ. ಬಿಎಸ್‌ಇನಲ್ಲಿ ಐಸಿಐಸಿಐ ಬ್ಯಾಂಕ್‌ ಷೇರು ಶೇ 2.83ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ಎಚ್‌ಡಿಎಫ್‌ಸಿ, ಎಕ್ಸಿಸ್‌ ಬ್ಯಾಂಕ್‌, ಸನ್‌ ಫಾರ್ಮಾ, ಎನ್‌ಟಿಪಿಸಿ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಷೇರುಗಳು ಮೌಲ್ಯವೂ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.