ADVERTISEMENT

ವಾಹನ, ಐ.ಟಿ. ಷೇರು ಗಳಿಕೆ: ಷೇರುಪೇಟೆ ಏರಿಕೆ

ಪಿಟಿಐ
Published 23 ಜೂನ್ 2022, 19:30 IST
Last Updated 23 ಜೂನ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಾಹನ, ಐ.ಟಿ. ಮತ್ತು ಬ್ಯಾಂಕಿಂಗ್ ವಲಯದ ಷೇರುಗಳ ಗಳಿಕೆಯಿಂದಾಗಿ ದೇಶದ ಷೇರುಪೇಟೆಗಳು ಗುರುವಾರದ ವಹಿವಾಟಿನಲ್ಲಿ ಶೇಕಡ 1ರವರೆಗೆ ಏರಿಕೆ ಕಂಡವು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 443 ಅಂಶ ಹೆಚ್ಚಾಗಿ 52,265 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 143 ಅಂಶ ಏರಿಕೆ ಕಂಡು 15,556 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

‘ಯುರೋಪಿನ ಮಾರುಕಟ್ಟೆಗಳು ಆರ್ಥಿಕ ಹಿಂಜರಿತದ ಭಯದಿಂದ ಹೊರಬರಲು ಹೆಣಗಾಡಿದ್ದರಿಂದ ಮಧ್ಯಾಹ್ನದ ವಹಿವಾಟಿನಲ್ಲಿ ಷೇರುಪೇಟೆಗಳು ತಮ್ಮ ಗಳಿಕೆಯಲ್ಲಿ ಒಂದಿಷ್ಟು ಕಳೆದುಕೊಂಡವು. ಆದರೆ, ಅಂತಿಮವಾಗಿ ಗಳಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸುವಲ್ಲಿ ಯಶಸ್ವಿಯಾದವು’ ಎಂದು ಆನಂದ ರಾಠಿ ಕಂಪನಿಯ ಈಕ್ವಿಟಿ ಸಂಶೋಧನೆಯ ಮುಖ್ಯಸ್ಥ ನರೇಂದ್ರ ಸೋಲಂಕಿ ತಿಳಿಸಿದ್ದಾರೆ.

ADVERTISEMENT

ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಹೆಚ್ಚಳ ಮಾಡುತ್ತಿರುವುದರಿಂದ ಆರ್ಥಿಕ ಹಿಂಜರಿತ ಉಂಟಾಗುವ ಸಾಧ್ಯತೆ ಇದೆ ಎಂದು ಅಮೆರಿಕದ ಫೆಡರಲ್‌ ರಿಸರ್ವ್‌ ಅಧ್ಯಕ್ಷ ಜೆರೊಮ್ ಪಾವೆಲ್‌ ಹೇಳಿದ್ದಾರೆ. ಇದು ಜಾಗತಿಕ ಷೇರುಪೇಟೆಗಳ ವಹಿವಾಟಿನ ಮೇಲೆ ಪರಿಣಾಮ ಬೀರಿತು.

ಅಮೆರಿಕ ಮತ್ತು ಯುರೋಪ್‌ನ ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಳ ಮಾಡುತ್ತಿರುವುದರಿಂದಾಗಿ ಜಾಗತಿಕ ಬೆಳವಣಿಯು ಕುಗ್ಗಲಿದೆ ಎನ್ನುವುದು ಹೂಡಿಕೆದಾರರ ಆತಂಕವಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 1.92ರಷ್ಟು ಇಳಿಕೆ ಕಂಡು ಬ್ಯಾರಲ್‌ಗೆ 109.60 ಡಾಲರ್‌ಗೆ ತಲುಪಿತು.

ಗಳಿಕೆ (%)
ಮಾರುತಿ
; 6.33
ಮಹೀಂದ್ರ; 4.41
ಏಷ್ಯನ್‌ ಪೇಂಟ್ಸ್‌; 3.39
ಭಾರ್ತಿ ಏರ್‌ಟೆಲ್‌; 2.96
ಎಚ್‌ಯುಎಲ್‌; 1.94

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.