ADVERTISEMENT

ಸೆನ್ಸೆಕ್ಸ್ 750 ಅಂಶ ಜಿಗಿತ

ಪಿಟಿಐ
Published 1 ಮಾರ್ಚ್ 2021, 19:31 IST
Last Updated 1 ಮಾರ್ಚ್ 2021, 19:31 IST

ಮುಂಬೈ: ದೇಶದ ಆರ್ಥಿಕತೆಯು ಮೂರನೇ ತ್ರೈಮಾಸಿಕದಲ್ಲಿ ಶೇ 0.4ರಷ್ಟು ಬೆಳವಣಿಗೆ ಕಂಡಿರುವುದು ಷೇರುಪೇಟೆಗಳಲ್ಲಿ ಸೋಮವಾರ ಹೂಡಿಕೆ ಚಟುವಟಿಕೆಯನ್ನು ಹೆಚ್ಚಾಗುವಂತೆ ಮಾಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 750 ಅಂಶ ಜಿಗಿತ ಕಂಡು 49,849 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ಮಧ್ಯಂತರ ವಹಿವಾಟಿನಲ್ಲಿ 50 ಸಾವಿರಕ್ಕೂ ಹೆಚ್ಚಿನ ಮಟ್ಟಕ್ಕೆ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 232 ಅಂಶ ಏರಿಕೆ ಕಂಡು 14,761 ಅಂಶಗಳಿಗೆ ತಲುಪಿತು.

ADVERTISEMENT

ಗಳಿಕೆ: ದಿನದ ವಹಿವಾಟಿನಲ್ಲಿ ಪವರ್‌ಗ್ರಿಡ್‌, ಒಎನ್‌ಜಿಸಿ, ಅಲ್ಟ್ರಾಟೆಕ್‌ ಸಿಮೆಂಟ್‌, ಏಷ್ಯನ್‌ ಪೇಂಟ್ಸ್‌, ಕೋಟಕ್‌ ಬ್ಯಾಂಕ್‌ ಮತ್ತು ಟೈಟಾನ್ ಷೇರುಗಳು ಶೇ 5.94ರವರೆಗೂ ಏರಿಕೆ ಕಂಡಿವೆ.

ಸತತ ಎರಡು ತ್ರೈಮಾಸಿಕಗಳಲ್ಲಿ ನಕಾರಾತ್ಮಕ ಹಾದಿಯಲ್ಲಿದ್ದ ದೇಶದ ಆರ್ಥಿಕತೆಯು ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ಸಕಾರಾತ್ಮಕ ಹಾದಿಗೆ ಮರಳಿರುವುದು ಷೇರುಪೇಟೆಯಲ್ಲಿ ಉತ್ತಮ ವಹಿವಾಟಿಗೆ ಕಾರಣವಾಯಿತು ಎಂದು ತಜ್ಞರು ಹೇಳಿದ್ದಾರೆ.

‘ದೇಶದ ಷೇರುಪೇಟೆಗಳು ಉತ್ತಮ ವಹಿವಾಟಿನೊಂದಿಗೆ ತಿಂಗಳನ್ನು ಆರಂಭಿಸಿವೆ. ಜಿಡಿಪಿ ಬೆಳವಣಿಗೆ ಸಕಾರಾತ್ಮಕವಾಗಿರುವುದು, ವಾಹನಗಳ ಮಾರಾಟದಲ್ಲಿ ಸುಧಾರಣೆ ಹಾಗೂ ತಯಾರಿಕಾ ವಲಯವು ಸಕಾರಾತ್ಮಕ ಹಾದಿಯಲ್ಲಿ ಇರುವುದು ಹೊಸ ಆಶಾವಾದ ಮೂಡಿಸಿದೆ’ ಎಂದು ಜಿಯೋಜಿತ್‌ ಹಣಕಾಸು ಸೇವೆಗಳ ಮುಖ್ಯ ಸಂಶೋಧಕ ವಿನೋದ್‌ ನಾಯರ್‌ ಹೇಳಿದ್ದಾರೆ.

ವಾಹನ, ಖಾಸಗಿ ಬ್ಯಾಂಕ್‌ಗಳು ಮತ್ತು ಲೋಹ ವಲಯದ ಸೂಚ್ಯಂಕಗಳು ಶೇ 1.5 ರಿಂದ ಶೇ 2.5ರವರೆಗೂ ಏರಿಕೆ ಕಂಡಿವೆ.

ಸ್ಮಾಲ್‌ & ಲಾರ್ಜ್‌ ಕ್ಯಾಪ್‌ ಸೂಚ್ಯಂಕಗಳು ಕ್ರಮವಾಗಿ ಶೇ 1.61 ಮತ್ತು ಶೇ 1.56ರಷ್ಟು ಏರಿಕೆ ಆಗಿವೆ. ಮಿಡ್‌ ಕ್ಯಾಪ್‌ ಸೂಚ್ಯಂಕ ಶೇ 1.46ರಷ್ಟು ಏರಿಕೆಯಾಗಿದೆ.

ಬಾಂಡ್‌ ಮಾರುಕಟ್ಟೆಯು ಸ್ಥಿರವಾಗಿರುವುದರಿಂದ ಏಷ್ಯಾದ ಷೇರುಪೇಟೆಗಳು ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದವು. ಅಮೆರಿಕದ ಆರ್ಥಿಕ ಉತ್ತೇಜನಾ ಕೊಡುಗೆಯೂ ಹೂಡಿಕೆಗೆ ಬೆಂಬಲ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.