
ಮುಂಬೈ: ಸತತ ಮೂರು ದಿನಗಳಿಂದ ಕುಸಿತ ಕಾಣುತ್ತಿದ್ದ ದೇಶದ ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರದ ವಹಿವಾಟಿನಲ್ಲಿ ಪುಟಿದೆದ್ದಿವೆ.
ಭಾರತದ ಜೊತೆ ಅಮೆರಿಕವು ಒಳ್ಳೆಯ ವ್ಯಾಪಾರ ಒಪ್ಪಂದವೊಂದನ್ನು ಮಾಡಿಕೊಳ್ಳಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿರುವುದು ಹಾಗೂ ಗ್ರೀನ್‌ಲ್ಯಾಂಡ್ ವಿಚಾರವಾಗಿ ಅವರು ಮಾತುಕತೆಯ ಮಾರ್ಗ ಅನುಸರಿಸುವ ಸೂಚನೆ ನೀಡಿದ ನಂತರದಲ್ಲಿ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ತೇಜಿ ವಹಿವಾಟು ನಡೆಯಿತು.
ರೂಪಾಯಿ ಮೌಲ್ಯದಲ್ಲಿ ಕಂಡುಬಂದ ತುಸು ಮಟ್ಟಿಗಿನ ಚೇತರಿಕೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿನ ಅಲ್ಪ ಇಳಿಕೆ ಕೂಡ ಸೂಚ್ಯಂಕಗಳ ಏರಿಕೆಗೆ ನೆರವಾದವು ಎಂದು ವರ್ತಕರು ತಿಳಿಸಿದ್ದಾರೆ.
ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 397 ಅಂಶ, ನಿಫ್ಟಿ 132 ಅಂಶ ಏರಿಕೆ ಕಂಡಿವೆ. ‘ಗ್ರೀನ್‌ಲ್ಯಾಂಡ್ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ತಣ್ಣಗಾಗುವ ಸೂಚನೆಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಮಾರುಟ್ಟೆಯಲ್ಲಿ ಹೊಸದಾಗಿ ಷೇರುಗಳನ್ನು ಖರೀದಿಸುವ ಉಮೇದು ಮೂಡಿದೆ’ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್‌ನ ಸಂಪತ್ತು ನಿರ್ವಹಣಾ ವಿಭಾಗದ ಸಂಶೋಧನಾ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕ ಹೇಳಿದ್ದಾರೆ.
‘ಅಲ್ಲದೆ, ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ವಿಚಾರವಾಗಿ ಹೊಸದಾಗಿ ಆಶಾಭಾವನೆ ಮೂಡಿದೆ’ ಎಂದು ಕೂಡ ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.