ADVERTISEMENT

ಆರ್‌ಐಎಲ್‌: ಹಕ್ಕಿನ ಷೇರುಖರೀದಿಸಲು ಕಂತು ಸೌಲಭ್ಯ

ಪಿಟಿಐ
Published 18 ಮೇ 2020, 19:30 IST
Last Updated 18 ಮೇ 2020, 19:30 IST
ಮುಕೇಶ್‌ ಅಂಬಾನಿ
ಮುಕೇಶ್‌ ಅಂಬಾನಿ   

ನವದೆಹಲಿ: ರಿಲಯನ್ಸ್‌ ಇಂಡಸ್ಟ್ರೀಸ್‌ನ (ಆರ್‌ಐಎಲ್‌) ಹಕ್ಕಿನ ಷೇರುಗಳನ್ನು ಖರೀದಿಸಲು ಮುಂದಾಗುವ ಕಂಪನಿಯ ಷೇರುದಾರರಿಗೆ ಕಂತುಗಳಲ್ಲಿ ಹಣ ಪಾವತಿಸುವ ಸೌಲಭ್ಯ ಒದಗಿಸಲಾಗಿದೆ.

₹ 53,125 ಕೋಟಿ ಮೊತ್ತದ ಹಕ್ಕಿನ ಷೇರುಗಳನ್ನು ಖರೀದಿಸುವವರು ಮೊದಲ ಕಂತಿನಲ್ಲಿ ಶೇ 25ರಷ್ಟು ಮತ್ತು ಉಳಿದ ಮೊತ್ತವನ್ನು ಮುಂದಿನ ವರ್ಷದಲ್ಲಿ ಎರಡು ಕಂತುಗಳಲ್ಲಿ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ.

ಹಕ್ಕಿನ ಷೇರುಗಳ ನೀಡಿಕೆ ಇದೇ 20ರಂದು ಆರಂಭಗೊಂಡು ಜೂನ್ 3ಕ್ಕೆ ಕೊನೆಗೊಳ್ಳಲಿದೆ. ಪ್ರತಿ 15 ಷೇರಿಗೆ ಒಂದು ಹಕ್ಕಿನ ಷೇರಿನ ರೂಪದಲ್ಲಿ (1;15) ₹ 1,257ರ ದರದಲ್ಲಿ ನೀಡಲು ಕಂಪನಿ ನಿರ್ಧರಿಸಿದೆ.

ADVERTISEMENT

ಹಕ್ಕಿನ ಷೇರು ಖರೀದಿಸುವಾಗ ಶೇ 25ರಷ್ಟನ್ನು ಪಾವತಿಸಬಹುದು. 2021ರ ಮೇನಲ್ಲಿ ಇಷ್ಟೇ ಮೊತ್ತವನ್ನು ಪಾವತಿಸಬಹುದು. ಉಳಿದ ಶೇ 50ರಷ್ಟನ್ನು ನವೆಂಬರ್‌ನಲ್ಲಿ ಪಾವತಿಸಲು ಅವಕಾಶ ನೀಡಲಾಗುವುದು ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ತೈಲದಿಂದ ಮೊಬೈಲ್‌ವರೆಗೆ ವೈವಿಧ್ಯಮಯ ವಹಿವಾಟು ನಡೆಸುವ ಕೋಟ್ಯಧಿಪತಿ ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಇಂಡಸ್ಟ್ರೀಸ್‌ (ಆರ್‌ಐಎಲ್‌), ಹಕ್ಕಿನ ಷೇರುಗಳ ಮೂಲಕ ₹ 53,125 ಕೋಟಿ ಸಂಗ್ರಹಿಸಲು ಮುಂದಾಗಿದೆ.

ಮೂರು ದಶಕಗಳ ಅವಧಿಯಲ್ಲಿನ ಅತಿದೊಡ್ಡ ಮತ್ತು ಮೊದಲ ಹಕ್ಕಿನ ಷೇರು ನೀಡಿಕೆ ಇದಾಗಿದೆ. ಕಂಪನಿಯ ಹಾಲಿ ಷೇರುದಾರರಿಗೆ ಹಕ್ಕಿನ ಷೇರುಗಳನ್ನು ನೀಡಿ ಈ ಮೊತ್ತ ಸಂಗ್ರಹಿಸಲು ಉದ್ದೇಶಿಸಲಾಗಿದೆ. ಕಂಪನಿಯನ್ನು ಸಾಲದಿಂದ ಮುಕ್ತಗೊಳಿಸುವ ಯೋಜನೆಯ ಅಂಗವಾಗಿ ಈ ಕ್ರಮಕ್ಕೆ ಮುಂದಾಗಿದೆ.

ಏನಿದು ಹಕ್ಕಿನ ಷೇರು: ಕಂಪನಿಯೊಂದು ತನ್ನ ಷೇರುದಾರರು ಹೊಂದಿರುವ ಷೇರುಗಳನ್ನು ಆಧರಿಸಿ, ಅನುಪಾತ ರೂಪದಲ್ಲಿ ಅವರಿಗೆ ವಿಶೇಷ ದರಕ್ಕೆ ಷೇರುಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸುವುದಕ್ಕೆ ಹಕ್ಕಿನ ಷೇರು ನೀಡಿಕೆ ಎನ್ನುತ್ತಾರೆ. ಸಾಮಾನ್ಯವಾಗಿ ನಗದು ಬಿಕ್ಕಟ್ಟು ಎದುರಿಸುವ ಕಂಪನಿಯು ಹಣ ಸಂಗ್ರಹಿಸಲು ಹಕ್ಕಿನ ಷೇರು ಬಳಸಿಕೊಳ್ಳುತ್ತದೆ.

‘ಆರ್‌ಐಎಲ್‌’ ವಿಷಯದಲ್ಲಿ ಇದು ಭಿನ್ನವಾಗಿದೆ. ಕಂಪನಿಯು ಸಾಲದಿಂದ ಮುಕ್ತಗೊಳ್ಳಲು, ಷೇರುದಾರರಿಗೆ ಪುರಸ್ಕಾರ ನೀಡಲು ಮತ್ತು ವಹಿವಾಟಿನ ಪ್ರಗತಿ ಬಗ್ಗೆ ಪ್ರವರ್ತಕರಲ್ಲಿನ ವಿಶ್ವಾಸದ ಪ್ರತೀಕವಾಗಿ ಈ ಕ್ರಮಕ್ಕೆ ಮುಂದಾಗಿದೆ.

ಅಂಕಿ ಅಂಶ

₹ 1,257: ಹಕ್ಕಿನ ಷೇರು ಬೆಲೆ

₹ 314.25: ಆರಂಭದಲ್ಲಿ 25 %ರಷ್ಟು ಮೊದಲ ಕಂತು

₹ 314.25: 2021ರ ಮೇನಲ್ಲಿ 25 %ರಷ್ಟು ಎರಡನೇ ಕಂತು

₹ 628.50: 2021ರ ನವೆಂಬರ್‌ನಲ್ಲಿ 50 % ರಷ್ಟು ಪಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.