ADVERTISEMENT

ಜವಳಿ ಮೇಲಿನ ಜಿಎಸ್‌ಟಿ ಹೆಚ್ಚಿಸದಂತೆ ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 4:42 IST
Last Updated 31 ಡಿಸೆಂಬರ್ 2021, 4:42 IST

ಬೆಂಗಳೂರು: ‘ಜವಳಿ ಮತ್ತು ಉಡುಪುಗಳ ಮೇಲಿನ ಜಿಎಸ್‌ಟಿ ದರವನ್ನು ಶೇ 5ರಿಂದ ಶೇ 12ಕ್ಕೆ ಹೆಚ್ಚಳ ಮಾಡುವ ಪ್ರಸ್ತಾವ ಕೈಬಿಡಬೇಕು’ ಎಂದು ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ಒತ್ತಾಯಿಸಿದೆ.

‘ಜವಳಿ ಮತ್ತು ಉಡುಪುಗಳ ಜಿಎಸ್‌ಟಿ ದರವನ್ನು ಜ.1ರಿಂದ ಹೆಚ್ಚಿಸಲು ಜಿಎಸ್‌ಟಿ ಮಂಡಳಿಯ 45ನೇ ಸಭೆಯಲ್ಲಿ ಶಿಫಾರಸು ಮಾಡಲಾಗಿದೆ. ಈ ನಿರ್ಧಾರವು ಕೈಮಗ್ಗ ಮತ್ತು ವಿದ್ಯುತ್ ಚಾಲಿತ ಮಗ್ಗಗಳ ಕ್ಷೇತ್ರದಲ್ಲಿ ನಿರಾಸಕ್ತಿ ಮೂಡಿಸಿದೆ’ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಎಂ. ರಾಮಚಂದ್ರಗೌಡ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಕೋವಿಡ್‌ ಸಾಂಕ್ರಾಮಿಕದ ಹೊಡೆತದಿಂದ ತತ್ತರಿಸಿ ಹೋಗಿರುವ ಉದ್ಯಮ ಎಚ್ಚೆತ್ತುಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಜಿಎಸ್‌ಟಿ ದರ ಏರಿಕೆ ಮಾಡಿದರೆ ಕೈಗಾರಿಕೆಗಳು ಮತ್ತು ಮಾರಾಟ ಕೇಂದ್ರಗಳು ತಾನಾಗಿಯೇ ಮುಚ್ಚುತ್ತವೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಜಿಎಸ್‌ಟಿ ದರ ಏರಿಕೆಯಾದರೆ ಅದನ್ನು ಗ್ರಾಹಕರಿಗೆ ವರ್ಗಾಯಿಸುವ ಅನಿವಾರ್ಯತೆ ಇದೆ. ಬಿಪಿಎಲ್ ಕುಟುಂಬಗಳಿಗೆ ಅನ್ನ, ಬಟ್ಟೆ, ವಸತಿಯನ್ನು ಕೈಗೆಟಕುವ ದರದಲ್ಲಿ ಸರ್ಕಾರ ಕಲ್ಪಿಸಬೇಕಾಗುತ್ತದೆ. ಆಹಾರದ ನಂತರದ ಸ್ಥಾನದಲ್ಲಿ ಬಟ್ಟೆ ಇದೆ. ಅತೀ ಬಡವರೂ ತಮ್ಮ ಮೈಮುಚ್ಚಿಕೊಳ್ಳಲು ಬಟ್ಟೆ ಖರೀದಿ ಮಾಡಲೇಬೇಕು. ದರ ಏರಿಕೆಯಾದರೆ ಬಡವರು ಬಟ್ಟೆ ಖರೀದಿ ಮಾಡುವುದೇ ಕಷ್ಟವಾಗಲಿದೆ’ ಎಂದರು.

ಶೇ 65ಕ್ಕೂ ಹೆಚ್ಚು ನೇಕಾರರು ದೊಡ್ಡ ಉದ್ಯಮಿಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರ ನಡುವೆ ಜಿಎಸ್‌ಟಿಯೂ ಹೊರೆಯಾದರೆ ನೇಕಾರ ಕುಟುಂಬಗಳಿಗೆ ನಿರುದ್ಯೋಗ ಸಮಸ್ಯೆ ಕಾಡಲಿದೆ ಎಂದು ಹೇಳಿದರು.

‘ಆದ್ದರಿಂದ ಜಿಎಸ್‌ಟಿ ದರವನ್ನು ಶೇ 5ರಲ್ಲೇ ಮುಂದುವರಿಸಬೇಕು. ಜಿಎಸ್‌ಟಿ ಅನ್ವಯವಾಗುವ ಮೊತ್ತವನ್ನು ₹40 ಲಕ್ಷದಿಂದ ₹2 ಕೋಟಿಗೆ ಹೆಚ್ಚಳ ಮಾಡಬೇಕು. ಅಂತರ ರಾಜ್ಯ ಸಾಗಾಣಿಕೆಗೆ ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.