ADVERTISEMENT

ದೇಶಿ ರೇಷ್ಮೆಗೆ ವರವಾದ 'ಕೋವಿಡ್': ಕಡಿಮೆಯಾದ ಆಮದು ಪ್ರಮಾಣ

ಕೊಂಡ್ಲಹಳ್ಳಿ ಜಯಪ್ರಕಾಶ
Published 16 ಫೆಬ್ರುವರಿ 2020, 4:03 IST
Last Updated 16 ಫೆಬ್ರುವರಿ 2020, 4:03 IST
ಮುತ್ತಿಗಾರಹಳ್ಳಿಯಲ್ಲಿ ರೇಷ್ಮೆ ಬಿಳಿಗೂಡು ಸಾಕಣೆ
ಮುತ್ತಿಗಾರಹಳ್ಳಿಯಲ್ಲಿ ರೇಷ್ಮೆ ಬಿಳಿಗೂಡು ಸಾಕಣೆ   

ಮೊಳಕಾಲ್ಮುರು (ಚಿತ್ರದುರ್ಗ ಜಿಲ್ಲೆ): ಚೀನಾ ದೇಶದ ನಿದ್ದೆಗೆಡಿಸಿರುವ ಮಾರಣಾಂತಿಕ ಕೋವಿಡ್‌–19 (ಕೊರೊನಾ ವೈರಸ್)ನಿಂದಾಗಿ ರಾಜ್ಯದ ರೇಷ್ಮೆಗೂಡು ಉತ್ಪಾದಕರಿಗೆ ಶುಕ್ರದೆಸೆ ಬಂದಿದೆ.

ವೈರಸ್‌ನ ಹಾವಳಿ ಹೆಚ್ಚಾಗುತ್ತಿದ್ದಂತೆ ರೇಷ್ಮೆಗೂಡು ದರ ಸಹ ಏರಿಕೆಯಾಗುತ್ತಿದೆ. ಈಚಿನ ವರ್ಷಗಳಲ್ಲಿ ಸಾರ್ವಕಾಲಿಕ ದಾಖಲೆ ದರ ಮುಟ್ಟಿದ್ದು, ಪ್ರಸ್ತುತ ಪ್ರತಿ ಕೆ.ಜಿ ದರ ₹ 600 ದಾಟಿದೆ. ಕೆಲ ತಿಂಗಳು ಈ ದರ ಮುಂದುವರಿಯುವ ಲಕ್ಷಣಗಳು ಇವೆ.

ದೇಶದ ಒಟ್ಟು ರೇಷ್ಮೆಗೂಡಿನ ಪ್ರಮಾಣದ ಅದರಲ್ಲೂ ಬೈವೋಲ್ಟನ್‌ನ (ಬಿಳಿಗೂಡು) ಶೇ 30ರಷ್ಟನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

ADVERTISEMENT

ರೇಷ್ಮೆ ಇಲಾಖೆ ಅಧಿಕಾರಿಗಳ ಪ್ರಕಾರ ‘ವಾರ್ಷಿಕ ತೆರಿಗೆ ಆಧಾರಿತವಾಗಿ 3,500 ಟನ್ ಕಚ್ಚಾರೇಷ್ಮೆ ಆಮದು ಮಾಡಿಕೊಳ್ಳಲಾಗುತ್ತದೆ. 2019ರ ನವಂಬರ್ ತನಕ 2,300 ಟನ್ ರೇಷ್ಮೆ ಆಮದು ಮಾಡಿಕೊಳ್ಳಲಾಗಿದೆ. ವಾಡಿಕೆಯಂತೆ ಜನವರಿಯಲ್ಲಿ 230 ಟನ್ ಆಮದು ಆಗಬೇಕಿತ್ತು. ಇದರ ಪ್ರಮಾಣ 170 ಟನ್ ಇರುವ ಮೂಲಕ 70-80 ಟನ್ ಕಡಿತವಾಗಿದೆ’ ಎಂದು ಹೇಳಿದರು.

‘ಸಾಮಾನ್ಯವಾಗಿ ಹಳದಿಗೂಡು ಪ್ರತಿ ಕೆ.ಜಿಗೆ ಸರಾಸರಿ ₹ 322 ಇರುತ್ತಿತ್ತು. ಇದರ ದರ ಈಗ ₹ 379ಕ್ಕೆ ಏರಿಕೆಯಾಗಿದೆ. ಬಿಳಿಗೂಡಿನ ದರ ಸರಾಸರಿ ಕೆ.ಜಿ ₹ 379 ಇರುತ್ತಿತ್ತು. ಇದು ₹ 513ಕ್ಕೆ ಏರಿಕೆಯಾಗಿದೆ. ಎರಡು ವರ್ಷಗಳ ಹಿಂದೆ ಬರಗಾಲ ಸಮಯದಲ್ಲಿ ಒಂದು ಸಾರಿ ಏರಿಕೆಯಾಗಿದ್ದು ಬಿಟ್ಟರೆ, ಸಾರ್ವಕಾಲಿಕ ದಾಖಲೆ ದರ ಇದಾಗಿದೆ. ಫೆ. 13ರಂದು ಕೊಂಡ್ಲಹಳ್ಳಿಯ ರೈತ ಗಿರಿಯಪ್ಪ ಪ್ರತಿ ಕೆ.ಜಿ ಗೂಡನ್ನು ₹ 605ಕ್ಕೆ ಮಾರಾಟ ಮಾಡಿದ್ದಾರೆ’ ಎಂದು ರೇಷ್ಮೆ ಇಲಾಖೆ ತಾಲ್ಲೂಕು ಸಹಾಯಕ ನಿರ್ದೇಶಕ ಏಕಾಂತಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಕೋವಿಡ್ ವೈರಸ್ ಭೀತಿಯ ನಂತರ ದರ ಹೆಚ್ಚಳವಾಗಿರುವುದು ನಿಜ. ಆದರೆ ಸರ್ಕಾರ ಅಧಿಕೃತವಾಗಿ ಆಮದು ನಿಷೇಧ ಮಾಡಿಲ್ಲ. ತೆರಿಗೆ ಆಧಾರಿತವಾಗಿ ಬರುವ ರೇಷ್ಮೆ ಪ್ರಮಾಣದಲ್ಲಿ ಕುಸಿತವಾಗಿದೆ. ಇದರ ನಿಖರ ಪ್ರಮಾಣ ತಿಂಗಳ ಅಂತ್ಯಕ್ಕೆ ಸಿಗುತ್ತದೆ. ಪ್ರಸಕ್ತ ಸ್ಥಿತಿ ಗಮನಿಸಿದಲ್ಲಿ ಈ ದರ ಎರಡು ತಿಂಗಳು ಮುಂದುವರಿಯುವ ಸಾಧ್ಯತೆಯಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.