ಚಿನ್ನ, ಬೆಳ್ಳಿ
ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಬೆಳ್ಳಿ ಧಾರಣೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಚಿನ್ನದ ಬೆಲೆ ಯಥಾಸ್ಥಿತಿಯಲ್ಲಿದೆ.
ಬೆಳ್ಳಿ ದರ ಕೆ.ಜಿಗೆ ₹6 ಸಾವಿರ ಹೆಚ್ಚಳವಾಗಿ, ₹1.63 ಲಕ್ಷದಂತೆ ಮಾರಾಟವಾಗಿದೆ. ಅಕ್ಟೋಬರ್ 6ರಂದು ಬೆಳ್ಳಿ ದರ ಕೆ.ಜಿಗೆ ₹7,400ರಷ್ಟು ಹೆಚ್ಚಳವಾಗಿತ್ತು. ಒಂದೇ ವಾರದಲ್ಲಿ ಎರಡನೇ ಬಾರಿಗೆ ತೀವ್ರ ಪ್ರಮಾಣದಲ್ಲಿ ಬೆಲೆ ಏರಿಕೆ ಆಗಿದೆ.
ಶೇ 99.9 ಮತ್ತು ಶೇ 99.5ರಷ್ಟು ಪರಿಶುದ್ಧತೆಯ (ಆಭರಣ ಚಿನ್ನ) 10 ಗ್ರಾಂ ಚಿನ್ನದ ದರವು ಕ್ರಮವಾಗಿ ₹1,26,600 ಮತ್ತು ₹1.26 ಲಕ್ಷ ಇದೆ. ಕಳೆದ ವಹಿವಾಟಿನಲ್ಲೂ ಇಷ್ಟೇ ದರವಿತ್ತು ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು, ಆರ್ಥಿಕ ಅನಿಶ್ಚಿತತೆ, ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತ ಮಾಡುವ ನಿರೀಕ್ಷೆ ಹೆಚ್ಚಳದಿಂದ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಬೆಳ್ಳಿ ಖರೀದಿಗೆ ಮುಂದಾಗಿದ್ದಾರೆ. ಜೊತೆಗೆ ಕೈಗಾರಿಕೆಗಳಲ್ಲಿ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಬೆಳ್ಳಿ ದರ ಏರಿಕೆಯಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.