
ನವದೆಹಲಿ: ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಸೈಬರ್ ಅಪರಾಧ ಚಟುವಟಿಕೆಗಳಿಗೆ ಅಥವಾ ಇತರ ಅಪರಾಧ ಕೃತ್ಯಗಳಿಗೆ ದುರ್ಬಳಕೆ ಮಾಡಿಕೊಂಡರೆ, ಆ ಸಿಮ್ ಕಾರ್ಡ್ ಯಾರ ಹೆಸರಿನಲ್ಲಿದೆಯೋ ಅವರನ್ನು ಹೊಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ನಾಗರಿಕರು ಎಚ್ಚರಿಕೆಯಿಂದ ಇರಬೇಕು, ಮೊಬೈಲ್ ಫೋನ್‌ನ ಐಎಂಇಐ ಸಂಖ್ಯೆಯನ್ನು ಬದಲಾಯಿಸಿದ್ದರೆ ಅಂತಹ ಮೊಬೈಲ್ ಫೋನ್ ಬಳಕೆ ಸೂಕ್ತವಲ್ಲ ಎಂದು ಕೇಂದ್ರ ದೂರಸಂಪರ್ಕ ಇಲಾಖೆಯ ಪ್ರಕಟಣೆ ಹೇಳಿದೆ.
ನಕಲಿ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್ ಖರೀದಿಸಬಾರದು, ಗ್ರಾಹಕರು ತಮ್ಮ ಹೆಸರಿನಲ್ಲಿ ಖರೀದಿಸಿದ ಸಿಮ್ ಕಾರ್ಡ್‌ಗಳನ್ನು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುವ ಇತರರಿಗೆ ನೀಡಬಾರದು ಎಂದು ಕೂಡ ಇಲಾಖೆಯು ಎಚ್ಚರಿಸಿದೆ.
‘ಮಾರ್ಪಾಡು ಮಾಡಿರುವ ಐಎಂಇಐ ಸಂಖ್ಯೆ ಹೊಂದಿರುವ ಸಾಧನಗಳನ್ನು ಬಳಕೆ ಮಾಡುವುದು, ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ಸಿಮ್ ಕಾರ್ಡ್ ಪಡೆದುಕೊಳ್ಳುವುದು, ಸೈಬರ್ ವಂಚನೆಯ ಕೆಲಸಗಳಿಗೆ ಸಿಮ್ ಕಾರ್ಡ್ ಬಳಕೆ ಮಾಡುವವರಿಗೆ ತಮ್ಮ ಸಿಮ್ ಕಾರ್ಡ್ ಒದಗಿಸುವುದರಿಂದ ಗಂಭೀರ ಸ್ವರೂಪದ ಕಾನೂನು ಪರಿಣಾಮಗಳಿಗೆ ಗುರಿಯಾಗಬೇಕಾದೀತು. ಒಬ್ಬರ ಹೆಸರಿನಲ್ಲಿ ಖರೀದಿಯಾದ ಸಿಮ್ ಕಾರ್ಡ್ ನಂತರದಲ್ಲಿ ದುರ್ಬಳಕೆ ಆದರೆ, ಮೂಲ ವ್ಯಕ್ತಿಯನ್ನು ಕೂಡ ಅಪರಾಧಿ ಎಂದು ಪರಿಗಣಿಸಬಹುದು’ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಮೊಬೈಲ್ ಐಎಂಇಐ ಸಂಖ್ಯೆ ಸೇರಿದಂತೆ ದೂರಸಂಪರ್ಕ ಕ್ಷೇತ್ರದಲ್ಲಿ ಬಳಕೆ ಮಾಡುವ ಸಾಧನಗಳ ಗುರುತುಗಳಲ್ಲಿ ಬದಲಾವಣೆ ಮಾಡಿದರೆ, ಅಂಥವರಿಗೆ ಭಾರಿ ದಂಡ ವಿಧಿಸಲು ದೂರಸಂಪರ್ಕ ಕಾಯ್ದೆ – 2023ರಲ್ಲಿ ಅವಕಾಶ ಇದೆ. ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ ₹50 ಲಕ್ಷದವರೆಗೆ ದಂಡ ಅಥವಾ ಅವೆರಡನ್ನೂ ವಿಧಿಸಲು ಅವಕಾಶ ಇದೆ.
ದೂರಸಂಪರ್ಕ ನಿಯಮಗಳು – 2024ರಲ್ಲಿನ ಅಂಶಗಳು, ಐಎಂಇಐ ಸಂಖ್ಯೆಯನ್ನು ಬದಲಾಯಿಸುವುದನ್ನು ನಿರ್ಬಂಧಿಸಿವೆ.
ಐಎಂಇಐ ವಿವರಗಳನ್ನು ನಾಗರಿಕರು ಸಂಚಾರ ಸಾರಥಿ ಪೋರ್ಟಲ್ ಅಥವಾ ಸಂಚಾರ ಸಾರಥಿ ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಬೇಕು ಎಂದು ಇಲಾಖೆಯು ಸಲಹೆ ನೀಡಿದೆ. ಈ ಪೋರ್ಟಲ್ ಮೂಲಕ ಮೊಬೈಲ್‌ನ ಬ್ರ್ಯಾಂಡ್ ಹೆಸರು, ತಯಾರಿಕಾ ಕಂಪನಿಯ ಹೆಸರನ್ನು ಪರಿಶೀಲಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.