ನವದೆಹಲಿ: ಷೇರುಪೇಟೆಯಲ್ಲಿ ನೋಂದಾಯಿತ ಹಾಗೂ ನೋಂದಾಯಿತವಲ್ಲದ ಕಂಪನಿಗಳೊಟ್ಟಿಗೆ ನಡೆಸಿರುವ ವಹಿವಾಟಿನ ಉಲ್ಲಂಘನೆ ಹಾಗೂ ಲಿಸ್ಟಿಂಗ್ ನಿಯಮಗಳ ಅನುಸರಣೆಯಲ್ಲಿ ನಿರ್ಲಕ್ಷ್ಯ ತೋರಿರುವುದಕ್ಕೆ ಸಂಬಂಧಿಸಿದಂತೆ ಅದಾನಿ ಸಮೂಹದ ಏಳು ಕಂಪನಿಗಳಿಗೆ, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಷೋಕಾಸ್ ನೋಟಿಸ್ ನೀಡಿದೆ.
ಅದಾನಿ ಎಂಟರ್‌ಪ್ರೈಸಸ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಪೋರ್ಟ್ಸ್, ಅದಾನಿ ಪವರ್, ಅದಾನಿ ಎನರ್ಜಿ ಸಲ್ಯೂಷನ್ಸ್, ಅದಾನಿ ಟೋಟಲ್ ಗ್ಯಾಸ್ ಹಾಗೂ ಅದಾನಿ ವಿಲ್ಮರ್ ಕಂಪನಿಗೆ ನೋಟಿಸ್ ನೀಡಲಾಗಿದೆ. ಮಾರ್ಚ್ ತ್ರೈಮಾಸಿಕ ಫಲಿತಾಂಶದ ಬಗ್ಗೆ ಷೇರುಪೇಟೆಗೆ ಸಲ್ಲಿಸಿರುವ ವರದಿಯಲ್ಲಿ ನೋಟಿಸ್ ಸ್ವೀಕರಿಸಿರುವ ಬಗ್ಗೆ ಕಂಪನಿಗಳು ಮಾಹಿತಿ ನೀಡಿವೆ.
ಈ ನೋಟಿಸ್‌ನಿಂದ ಕಂಪನಿಯ ಕಾರ್ಯ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿವೆ. ಎಸಿಸಿ ಮತ್ತು ಅಂಬುಜಾ ಸಿಮೆಂಟ್‌ಗೆ ನೋಟಿಸ್ ಜಾರಿಯಾಗಿಲ್ಲ.
ನೋಟಿಸ್ ನೀಡಿದ್ದು ಏಕೆ?:
ವಾಸ್ತವಿಕ ಬೆಲೆಗಿಂತ ಕೃತಕ ಬೆಲೆಯಲ್ಲಿ ಅದಾನಿ ಸಮೂಹದ ಷೇರುಗಳು ಮಾರಾಟವಾಗುತ್ತಿವೆ ಎಂದು 2023ರ ಜನವರಿಯಲ್ಲಿ ಅಮೆರಿಕದ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆಯು ವರದಿಯನ್ನು ಬಿಡುಗಡೆಗೊಳಿಸಿತ್ತು. ಅದಾನಿ ಸಮೂಹವು ಈ ಆರೋಪವನ್ನು ನಿರಾಕರಿಸಿತ್ತು. ಈ ವರದಿಗೆ ಸಂಬಂಧಿಸಿದಂತೆ ಸೆಬಿ ತನಿಖೆ ನಡೆಸುತ್ತಿದೆ. ಇದರ ಭಾಗವಾಗಿಯೇ ಷೋಕಾಸ್ ನೋಟಿಸ್ ನೀಡಿದೆ.
ಕಂಪನಿಗಳ ವಿರುದ್ಧ ದೋಷಾರೋಪಣೆ ಹೊರಿಸಿ ನೋಟಿಸ್ ನೀಡಿಲ್ಲ. ಹಿಂಡೆನ್‌ಬರ್ಗ್ ರಿಸರ್ಚ್ ಆರೋಪಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಜರುಗಿಸಬಾರದು ಎಂಬ ಬಗ್ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದೆ.
ವಿದೇಶಿ ವಹಿವಾಟಿನ ನಿಯಮಗಳ ಉಲ್ಲಂಘನೆ, ಲಿಸ್ಟಿಂಗ್ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ಹಾಗೂ ಲೆಕ್ಕ ಪರಿಶೋಧಕರ ಪ್ರಮಾಣ ಪತ್ರಗಳ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಅದಾನಿ ಎಂಟರ್‌ಪ್ರೈಸಸ್‌ಗೆ ಎರಡು ನೋಟಿಸ್ ನೀಡಲಾಗಿದೆ.
ಅದಾನಿ ಪೋರ್ಟ್ಸ್ ತನ್ನ ಹಣಕಾಸು ವಹಿವಾಟಿನ ಬಗ್ಗೆ ವಾರ್ಷಿಕ ವರದಿಯಲ್ಲಿ ಮಾಹಿತಿ ಬಹಿರಂಗಪಡಿಸಿಲ್ಲ. ಜೊತೆಗೆ, ಕಂಪನಿಯ ಸಂಹಿತೆ ಉಲ್ಲಂಘಿಸಿರುವುದರಿಂದ ನೋಟಿಸ್ ನೀಡಲಾಗಿದೆ. ಅದಾನಿ ಪವರ್‌ಗೆ ಎರಡು ನೋಟಿಸ್ ನೀಡಲಾಗಿದ್ದು, ಈಗಾಗಲೇ ಇದಕ್ಕೆ ಉತ್ತರಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.