ನವದೆಹಲಿ: ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಸೋಮವಾರ ಆರಂಭಗೊಂಡಿದ್ದು, ₹3.92 ಲಕ್ಷ ಕೋಟಿ ಮೌಲ್ಯದ 2,251.25 ಮೆಗಾಹರ್ಟ್ಸ್ (ಎಂಎಚ್‌ಝಡ್) ತರಂಗಾಂತರಗಳನ್ನು ಬಿಡ್ಡಿಂಗ್‌ಗೆ ಇರಿಸಲಾಗಿದೆ.
ಮೊಬೈಲ್ ಸೇವೆಗಳಿಗೆ ಸಂಬಂಧಿಸಿದ ಏಳು ಫ್ರೀಕ್ವೆನ್ಸಿಗಳನ್ನು – 700 ಮೆಗಾಹರ್ಟ್ಸ್, 800 ಮೆಗಾಹರ್ಟ್ಸ್, 900 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್, 2100 ಮೆಗಾಹರ್ಟ್ಸ್, 2300 ಮೆಗಾಹರ್ಟ್ಸ್, 2500 ಮೆಗಾಹರ್ಟ್ಸ್ ಬ್ಯಾಂಡ್‌ಗಳ ಹರಾಜು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.
ಈಗ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ 3300 ಮತ್ತು 3600 ಮೆಗಾಹರ್ಟ್ಸ್ (5ಜಿ) ಬ್ಯಾಂಡ್‌ಗಳು ಒಳಗೊಂಡಿಲ್ಲ. ಅವುಗಳ ಹರಾಜು ನಂತರ ನಡೆಯಲಿದೆ.
ಯಶಸ್ವಿ ಬಿಡ್‌ದಾರರು ಬಿಡ್‌ನ ಸಂಪೂರ್ಣ ಮೊತ್ತವನ್ನು ಒಂದೇ ಬಾರಿ (ಮುಂಗಡ) ಪಾವತಿಸಬಹುದು. ಅಥವಾ ನಿರ್ದಿಷ್ಟ ಮೊತ್ತವನ್ನು ಮುಂಗಡ (700, 800, 900 ಮೆಗಾಹರ್ಟ್ಸ್ ಬ್ಯಾಂಡ್‌ಗಳಿಗೆ ಶೇ 25ರಷ್ಟು, 1800, 2,100, 2,300, 2,500 ಮೆಗಾಹರ್ಟ್ಸ್ ಬ್ಯಾಂಡ್‌ಗಳಿಗೆ ಶೇ 50ರಷ್ಟು) ಪಾವತಿಸಿ ಉಳಿದ ಮೊತ್ತವನ್ನು ಎರಡು ವರ್ಷಗಳ ಬಳಿಕ ಗರಿಷ್ಠ 16 ಇಎಂಐಗಳಲ್ಲಿ ಪಾವತಿಸಲು ಅವಕಾಶ ನೀಡಲಾಗಿದೆ ಎಂದೂ ಮೂಲಗಳು ತಿಳಿಸಿವೆ.
ತರಂಗಾಂತರಗಳನ್ನು 20 ವರ್ಷಗಳ ಅವಧಿಗೆ ನೀಡಲಾಗುತ್ತದೆ.
ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ಸ್ಪೆಕ್ಟ್ರಂ ಹರಾಜಿಗಾಗಿ ಒಟ್ಟು ₹13,475 ಕೋಟಿ ಭದ್ರತಾ ಠೇವಣಿ (ಅರ್ನೆಸ್ಟ್ ಮನಿ ಡೆಪೋಸಿಟ್/ಇಎಂಡಿ) ಇಟ್ಟಿವೆ.
ದೇಶದ ಅತಿದೊಡ್ಡ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೊ ₹10,000 ಕೋಟಿ ಹಾಗೂ ಭಾರ್ತಿ ಏರ್‌ಟೆಲ್ ₹3,000 ಕೋಟಿ ಇಎಂಡಿ ಇಟ್ಟಿವೆ. ವೊಡಾಫೋನ್ ಐಡಿಯಾ ₹475 ಕೋಟಿ ಇಎಂಡಿ ಇಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.