ADVERTISEMENT

ಉದ್ಯಮಿ ಶ್ರೀಚಂದ್ ಹಿಂದುಜಾ ನಿಧನ

ರಾಯಿಟರ್ಸ್
Published 17 ಮೇ 2023, 21:15 IST
Last Updated 17 ಮೇ 2023, 21:15 IST
ಶ್ರೀಚಂದ್ ಹಿಂದುಜಾ
ಶ್ರೀಚಂದ್ ಹಿಂದುಜಾ    

ಲಂಡನ್: ಭಾರತ ಮೂಲದ ಕೋಟ್ಯಧಿಪತಿ, ವಿಶ್ವ ಪ್ರಸಿದ್ಧ ಉದ್ಯಮಿ ಹಾಗೂ ಬ್ರಿಟನ್‌ನ ಶ್ರೀಮಂತ ಕುಟುಂಬದ ಶ್ರೀಚಂದ್ ಪರಮಾನಂದ ಹಿಂದುಜಾ (87) ನಿಧನರಾದರು ಎಂದು ಕುಟುಂಬವು ಬುಧವಾರ ತಿಳಿಸಿದೆ.

ಅವರ ನಿಧನ ಕುರಿತು ಮಕ್ಕಳಾದ ಶಾನು ಹಾಗೂ ವಿನೂ ಹಿಂದುಜಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಶ್ರೀಚಂದ್‌ ಹಾಗೂ ಅವರ ತಮ್ಮ ಗೋಪಿಚಂದ್ ಅವರು 2022ರಲ್ಲಿ ಸಂಡೆ ಟೈಮ್ಸ್‌ನ ಶ್ರೀಮಂತರ ಪಟ್ಟಿಯಲ್ಲಿ ಸತತ ನಾಲ್ಕನೇ ಬಾರಿಗೆ ಅಗ್ರಸ್ಥಾನ ಪಡೆದಿದ್ದರು. ಅವರ ಆಸ್ತಿಯ ಅಂದಾಜು ಮೌಲ್ಯ ₹ 2.96 ಲಕ್ಷ ಕೋಟಿ.

ADVERTISEMENT

ಅವರು ಹಲವಾರು ಕಂಪನಿಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಬ್ಯಾಂಕಿಂಗ್, ರಾಸಾಯನಿಕಗಳು, ಮಾಹಿತಿ ತಂತ್ರಜ್ಞಾನ, ವಾಣಿಜ್ಯ ವಾಹನಗಳ ತಯಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಕಂಪನಿಗಳನ್ನು ಮುನ್ನಡೆಸಿದ್ದರು.

ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಬೊಪೋರ್ಸ್‌ ಹಗರಣದಲ್ಲಿ ಶ್ರೀಚಂದ್ ಹಾಗೂ ಅವರ ಇಬ್ಬರು ತಮ್ಮಂದಿರಾದ ಗೋಪಿಚಂದ್‌ ಹಾಗೂ ಪ್ರಕಾಶ್ ವಿರುದ್ಧ ಆರೋಪ ಕೇಳಿಬಂದಿತ್ತು.

ಸ್ವೀಡನ್‌ ಮೂಲದ, ಫಿರಂಗಿ ತಯಾರಕ ಕಂಪನಿ ಎ.ಬಿ.ಬೋಫೋರ್ಸ್‌ಗೆ ಭಾರತದ ಸರ್ಕಾರದ ಗುತ್ತಿಗೆಯನ್ನು ಕೊಡಿಸಲು ಅಕ್ರಮವಾಗಿ ₹ 64 ಕೋಟಿ ಕಮಿಷನ್‌ ಪಡೆದಿದ್ದ ಆರೋಪ ಇವರ ಮೇಲಿತ್ತು. ಹಿಂದುಜಾ ಸಹೋದರರು ಸೇರಿದಂತೆ ಎಲ್ಲ ಆರೋಪಿಗಳನ್ನು ದೆಹಲಿ ಹೈಕೋರ್ಟ್ 2005ರಲ್ಲಿ ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.