ADVERTISEMENT

ಬೆಂಗಳೂರಿಗೆ ಕಾಲಿಟ್ಟ ‘ಸ್ಟಾಂಜಾ ಲಿವಿಂಗ್‌’

ಅತ್ಯಾಧುನಿಕ ಸೌಲಭ್ಯಗಳ ವಸತಿನಿಲಯ

​ಕೇಶವ ಜಿ.ಝಿಂಗಾಡೆ
Published 10 ಜೂನ್ 2019, 19:45 IST
Last Updated 10 ಜೂನ್ 2019, 19:45 IST
ಆನಿಂದ್ಯಾ ದತ್ತಾ
ಆನಿಂದ್ಯಾ ದತ್ತಾ   

ಬೆಂಗಳೂರು: ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಧುನಿಕ ಸ್ಪರ್ಶ ನೀಡಿರುವ ದೆಹಲಿಯ ಸ್ಟಾರ್ಟ್‌ಅಪ್‌, ‘ಸ್ಟಾಂಜಾ ಲಿವಿಂಗ್‌’ (Stanza Living), ಈಗ ಬೆಂಗಳೂರಿನಲ್ಲಿ ತನ್ನ ಸೇವೆ ಆರಂಭಿಸಿದೆ.

ಸಾಂಪ್ರದಾಯಿಕ ವಿದ್ಯಾರ್ಥಿನಿಲಯ ಪರಿಕಲ್ಪನೆಗೆ ‘ಸ್ಟಾಂಜಾ ಲಿವಿಂಗ್‌’ ಭಿನ್ನವಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ 27 ವಸತಿ ನಿಲಯಗಳು ಬೆಂಗಳೂರಿನಲ್ಲಿ ಈ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಿವೆ. ಮತ್ತಿಕೆರೆ, ಬನ್ನೇರುಘಟ್ಟ, ಕೋರಮಂಗಲ, ಯಲಹಂಕ, ಎಲೆಕ್ಟ್ರಾನಿಕ್‌ ಸಿಟಿ ಮತ್ತಿತರ ಕಡೆಗಳಲ್ಲಿನ ಪ್ರಮುಖ ಶೈಕ್ಷಣಿಕ ಕೇಂದ್ರಗಳ ಆಸುಪಾಸಿನಲ್ಲಿ ಈ ‘ಸ್ಟಾಂಜಾ ಲಿವಿಂಗ್‌’ ಅಸ್ತಿತ್ವಕ್ಕೆ ಬಂದಿವೆ. ಇಲ್ಲಿ ಬರೀ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇದೆ.

‘ಸಾಂಪ್ರದಾಯಿಕ ವಿದ್ಯಾರ್ಥಿನಿಲಯ ಪರಿಕಲ್ಪನೆಗೆ ವಿಲಾಸಿ ಹೋಟೆಲ್‌ ಮಾದರಿಯ ಗುಣಮಟ್ಟದ ಸೇವೆ, ಬ್ರಾಡ್‌ಬ್ಯಾಂಡ್‌, ಲಾಂಡ್ರಿ ಸೇವೆ, ಮೊಬೈಲ್‌ ಆ್ಯಪ್‌ ಬಳಕೆ ಮೂಲಕ ಆಧುನಿಕತೆಯ ಸ್ಪರ್ಶ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಆರಾಮದಾಯಕ ಮತ್ತು ಕಿರಿಕಿರಿ ಮುಕ್ತ ವಸತಿ ನಿಲಯದ ಸೌಲಭ್ಯ ಇದಾಗಿದೆ. ಸಿಸಿಟಿವಿ ಕ್ಯಾಮೆರಾಗಳ ಸುರಕ್ಷತೆಯ ಅಭಯ, ಗುಣಮಟ್ಟದ ಊಟ – ತಿಂಡಿ ಮುಂತಾದವು ಇದರ ಇತರ ವೈಶಿಷ್ಟ್ಯತೆಗಳಾಗಿವೆ’ ಎಂದು ಸಹ ಸ್ಥಾಪಕರಾದ ಆನಿಂದ್ಯಾ ದತ್ತಾ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಈ ನವೋದ್ಯಮವನ್ನು ಆ್ಯಂಡಿಯಾ ದತ್ತಾ 2017ರಲ್ಲಿ ಸ್ಥಾಪಿಸಿದ್ದಾರೆ. ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿನ (ಎನ್‌ಸಿಆರ್‌) ಯಶಸ್ವಿ ವಹಿವಾಟಿನ ನಂತರ ಬೆಂಗಳೂರಿಗೆ ಕಾಲಿಟ್ಟಿದೆ. ದೆಹಲಿ ನಂತರದ ಅತಿದೊಡ್ಡ ಮಾರುಕಟ್ಟೆ ಇದಾಗಿದೆ. ಒಂದು ವರ್ಷಾವಧಿಯಲ್ಲಿ ಬೆಂಗಳೂರಿನ ವಹಿವಾಟಿನಿಂದ ₹ 70 ಕೋಟಿಗಳ ವಹಿವಾಟು ನಿರೀಕ್ಷಿಸಲಾಗಿದೆ.

ಸೌಲಭ್ಯಗಳು: ದಿನಕ್ಕೆ 4 ಬಾರಿ ತಿಂಡಿ–ಊಟ, ಗರಿಷ್ಠ ವೇಗದ ಇಂಟರ್‌ನೆಟ್‌, ಹೌಸ್‌ ಕೀಪಿಂಗ್, ಲಾಂಡ್ರಿ ಸೇವೆ, ವಿವಿಧ ಬಗೆಯ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಮಧ್ಯೆ ಸಂವಹನಕ್ಕೆ ಅವಕಾಶ ಮತ್ತಿತರ ಸೌಲಭ್ಯಗಳಿವೆ. ನಿಲಯದಲ್ಲಿನ ಲೋಪಗಳ ಬಗ್ಗೆ ದೂರು ನೀಡಲು ಆ್ಯಪ್ ಬಳಸಬಹುದು. ಸಸ್ಯಾಹಾರಿ – ಮಾಂಸಾಹಾರಿ ಊಟದ ವ್ಯವಸ್ಥೆ ಇರಲಿದೆ.

ರ‍್ಯಾಗಿಂಗ್‌, ಕಿರುಕುಳ ತಡೆಗೆ ಕಠಿಣ ಕ್ರಮಗಳನ್ನು ಅಳವಡಿಸಲಾಗಿದೆ. ವಿದ್ಯಾರ್ಥಿಗಳು ಯಾವುದೇ ಬಗೆಯ ಸೇವಾ ಲೋಪದ ಬಗ್ಗೆ ಮೊಬೈಲ್‌ ಆ್ಯಪ್‌ನಲ್ಲಿ ದೂರು ದಾಖಲಿಸಿದರೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಚಲನವಲನವನ್ನು ಪಾಲಕರಿಗೆ ತಿಳಿಸಿ ಅವರ ಒಪ್ಪಿಗೆ ಪಡೆಯುವ ಸೌಲಭ್ಯವೂ ಇಲ್ಲಿದೆ.

‘ಬಾಡಿಗೆ ಪ್ರತಿ ತಿಂಗಳಿಗೆ ಪ್ರತಿ ವಿದ್ಯಾರ್ಥಿಗೆ ₹ 5 ಸಾವಿರದಿಂದ ₹ 20 ಸಾವಿರದವರೆಗೆ ಇದೆ. ತಿಂಗಳ ಬಾಡಿಗೆಯು ಕೋಣೆ ಹಂಚಿಕೊಳ್ಳುವ, ಒಂಟಿಯಾಗಿ ಇರಲು ಬಯಸುವುದನ್ನು ಆಧರಿಸಲಿದೆ. ಸೇವೆಗಳಲ್ಲಿ ಮಾತ್ರ ಯಾವುದೇ ತಾರತಮ್ಯ ಇರುವುದಿಲ್ಲ. ಉಡುಪಿ, ಮೈಸೂರು, ಬೆಳಗಾವಿ, ಧಾರವಾಡಗಳಲ್ಲಿ ಒಂದು ವರ್ಷದಲ್ಲೇ ಸೇವೆ ವಿಸ್ತರಿಸುವ ಆಲೋಚನೆ ಇದೆ’ ಎಂದೂ ಅವರು ಹೇಳಿದ್ದಾರೆ.

ಮಾಹಿತಿಗೆ ಅಂತರ್ಜಾಲ ತಾಣ https://www.stanzaliving.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.