ADVERTISEMENT

2 ವರ್ಷಗಳಲ್ಲಿ ನಷ್ಟದಿಂದ ಹೊರ ಬರುವ ಭರವಸೆ

ಸ್ಥಾಯಿ ಸಮಿತಿಗೆ 11 ಬ್ಯಾಂಕ್‌ ಮುಖ್ಯಸ್ಥರ ವಾಗ್ದಾನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2018, 18:28 IST
Last Updated 26 ಜೂನ್ 2018, 18:28 IST
   

ನವದೆಹಲಿ (ಪಿಟಿಐ): ಹೆಚ್ಚುತ್ತಿರುವ ವಸೂಲಾಗದ ಸಾಲದ (ಎನ್‌ಪಿಎ) ಸುಳಿಯಿಂದ ಇನ್ನೆರಡು ವರ್ಷಗಳಲ್ಲಿ ಹೊರಬರುವುದಾಗಿ ಸರ್ಕಾರಿ ಸ್ವಾಮ್ಯದ 11 ಬ್ಯಾಂಕ್‌ಗಳ ಮುಖ್ಯಸ್ಥರು ಸಂಸತ್ತಿನ ಸ್ಥಾಯಿ ಸಮಿತಿಗೆ ಭರವಸೆ ನೀಡಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿರುವ ಕಟ್ಟುನಿಟ್ಟಿನ ನಿರ್ಬಂಧಿತ ಕ್ರಮಗಳಿಂದ 2020ರ ವೇಳೆಗೆ ಹೊರ ಬರುವುದಾಗಿ ತಿಳಿಸಿವೆ. ಬ್ಯಾಂಕ್‌ಗಳ ಸಾಲ ನೀಡಿಕೆಯು ಸ್ಥಗಿತಗೊಂಡಿರುವುದರ ಬಗ್ಗೆಯೂ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಕಾಂಗ್ರೆಸ್‌ ಮುಖಂಡ ಎಂ. ವೀರಪ್ಪ ಮೊಯಿಲಿ ಅವರ ನೇತೃತ್ವದಲ್ಲಿನ ಹಣಕಾಸಿಗೆ ಸಂಬಂಧಿಸಿದ ಸ್ಥಾಯಿ ಸಮಿತಿ ಮುಂದೆ ಬ್ಯಾಂಕ್‌ ಮುಖ್ಯಸ್ಥರು ಮಂಗಳವಾರ ಹಾಜರಾಗಿದ್ದರು. ಸಮಿತಿಯ ಸದಸ್ಯರು ಕೇಳಿದ ಪ್ರಶ್ನೆಗಳಿಗೆಲ್ಲ ಬ್ಯಾಂಕ್‌ ಮುಖ್ಯಸ್ಥರು ಉತ್ತರ ನೀಡಿದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಆರ್‌ಬಿಐ ಸೂಚಿಸಿರುವ ನಿರ್ಬಂಧಿತ ಕ್ರಮಗಳ ವ್ಯಾಪ್ತಿಗೆ ಒಳಪಟ್ಟಿರುವ ಬ್ಯಾಂಕ್‌ಗಳು ತಮ್ಮ, ತಮ್ಮ ‘ಎನ್‌ಪಿಎ’ ಹೊರೆ ತಗ್ಗಿಸಲು ಕೈಗೊಂಡಿರುವ ಕ್ರಮಗಳನ್ನು ಸಭೆಯ ಗಮನಕ್ಕೆ ತಂದವು.

ಆರ್‌ಬಿಐ ನಿಗದಿಪಡಿಸಿರುವ ಕ್ರಮಗಳಡಿ, ಲಾಭಾಂಶ ವಿತರಣೆ ಮೇಲೆ ನಿರ್ಬಂಧ ಜಾರಿಯಲ್ಲಿ ಇದೆ. ಶಾಖೆಗಳನ್ನು ವಿಸ್ತರಣೆ ಮಾಡದಂತೆ ಸೂಚಿಸಲಾಗಿದೆ. ಭವಿಷ್ಯದ ವೆಚ್ಚಗಳಿಗಾಗಿ ಹೆಚ್ಚಿನ ಮೊತ್ತ ತೆಗೆದು ಇರಿಸಬೇಕಾಗಿದೆ. ನಿರ್ದೇಶಕರ ಭತ್ಯೆ, ಶುಲ್ಕಗಳ ಮೇಲೆ ಮಿತಿ ವಿಧಿಸಲಾಗಿದೆ.

ಆರ್‌ಬಿಐ ಗವರ್ನರ್‌ ಉರ್ಜಿತ್ ಪಟೇಲ್‌ ಅವರು ವರ್ಷದಲ್ಲಿ ಕನಿಷ್ಠ ಎರಡು ಬಾರಿ ಸಮಿತಿ ಮುಂದೆ ಹಾಜರಾಗಿ ಅರ್ಥ ವ್ಯವಸ್ಥೆಯ ಬಗ್ಗೆ ಚಿತ್ರಣ ನೀಡುವ ಸಂಪ್ರದಾಯವನ್ನು ಪಾಲಿಸಬೇಕು ಎಂದೂ ಸ್ಥಾಯಿ ಸಮಿತಿ ಅಭಿಪ್ರಾಯಪಟ್ಟಿದೆ.

ಹಗರಣಗಳಿಗೆ ಸಂಬಂಧಿಸಿದಂತೆ ವಿವಿಧ ಬ್ಯಾಂಕ್‌ಗಳ ಹಾಲಿ ಮತ್ತು
ಮಾಜಿ ಮುಖ್ಯಸ್ಥರ ಬಂಧನ ಮತ್ತು ಮೊಕದ್ದಮೆ ದಾಖಲಿಸುತ್ತಿರುವುದು ಬ್ಯಾಂಕಿಂಗ್‌ ವಲಯದಲ್ಲಿ ಭೀತಿ ಮೂಡಿಸಿದೆ. ಇದು ಅವುಗಳ ಸಾಲ ನೀಡಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.