ADVERTISEMENT

ಷೇರುಪೇಟೆ ವಂಚನೆ: ಸೆಬಿ ಮಾಜಿ ಅಧ್ಯಕ್ಷೆ ಮಾಧವಿ,ಇತರರ ವಿರುದ್ಧ ಎಫ್‌ಐಆರ್‌ಗೆ ಆದೇಶ

ಪಿಟಿಐ
Published 2 ಮಾರ್ಚ್ 2025, 11:29 IST
Last Updated 2 ಮಾರ್ಚ್ 2025, 11:29 IST
<div class="paragraphs"><p>ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್</p></div>

ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್

   

ಮುಂಬೈ: ಷೇರು ಮಾರುಕಟ್ಟೆ ವಂಚನೆ ಮತ್ತು ನಿಯಂತ್ರಕ ನಿಯಮಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಇತರ ಐವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲ್ಲಿನ ವಿಶೇಷ ನ್ಯಾಯಾಲಯವು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿರ್ದೇಶನ ನೀಡಿದೆ.

ನಿಯಂತ್ರಕ ನಿಯಮಗಳ ಪಾಲನೆಯಲ್ಲಿ ಲೋಪಗಳು ಮತ್ತು ಒಳಸಂಚುಗಳ ಬಗ್ಗೆ ಪ್ರಾಥಮಿಕ ಹಂತದ ಸಾಕ್ಷ್ಯವಿದ್ದು, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ವಿಶೇಷ ಎಸಿಬಿ ನ್ಯಾಯಾಲಯದ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್ ಶನಿವಾರ ನೀಡಿರುವ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ನ್ಯಾಯಾಲಯವು ತನಿಖೆಯನ್ನು ಮೇಲ್ವಿಚಾರಣೆ ಮಾಡುವುದಾಗಿ ಹೇಳಿದ್ದು, 30 ದಿನಗಳಲ್ಲಿ ಪ್ರಕರಣದ ಸ್ಥಿತಿ ವರದಿಯನ್ನು ಕೇಳಿದೆ.

ಆರೋಪಗಳು ಗಂಭೀರ ಅಪರಾಧದ ಬಗ್ಗೆ ಬೆಳಕು ಚೆಲ್ಲಿವೆ. ಹಾಗಾಗಿ, ತನಿಖೆಯ ಅಗತ್ಯವಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.

ತನಿಖಾ ಸಂಸ್ಥೆಗಳು ಮತ್ತು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ(ಸೆಬಿ) ನಿಷ್ಕ್ರಿಯತೆಯ ಹಿನ್ನೆಲೆ ಸಿಆರ್‌ಪಿಸಿ(ಕ್ರಿಮಿನಲ್ ಪ್ರೊಸೀಜರ್ ಕೋಡ್) ನಿಬಂಧನೆಗಳ ಅಡಿಯಲ್ಲಿ ನ್ಯಾಯಾಂಗ ಹಸ್ತಕ್ಷೇಪ ಮಾಡಬೇಕಾಯಿತು ಎಂದು ನ್ಯಾಯಾಲಯ ಹೇಳಿದೆ.

ದೂರುದಾರರು ಮಾಧ್ಯಮ ವರದಿಗಾರರಾಗಿದ್ದು, ಆರೋಪಿಗಳು ದೊಡ್ಡ ಪ್ರಮಾಣದ ಹಣಕಾಸು ವಂಚನೆ, ನಿಯಂತ್ರಕ ನಿಯಮಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರ ಎಸಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿದ್ದರು.

ಸೆಬಿ ಅಧಿಕಾರಿಗಳು ತಮ್ಮ ಶಾಸನಬದ್ಧ ಕರ್ತವ್ಯ ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಮಾರುಕಟ್ಟೆಯ ತಿರುಚುವಿಕೆಗೆ ಅನುವು ಮಾಡಿಕೊಟ್ಟಿದ್ದಾರೆ. ನಿಗದಿತ ಮಾನದಂಡಗಳನ್ನು ಪೂರೈಸದ ಕಂಪನಿಯ ಪಟ್ಟಿಯನ್ನು ಅನುಮತಿಸುವ ಮೂಲಕ ಕಾರ್ಪೊರೇಟ್ ವಂಚನೆಗೆ ದಾರಿಮಾಡಿಕೊಟ್ಟಿದ್ದಾರೆ ಎಂದು ದೂರುದಾರರು ಹೇಳಿದ್ದಾರೆ.

ಈ ಕುರಿತು ಹಲವು ಬಾರಿ ಪೊಲೀಸ್‌ ಠಾಣೆ ಹಾಗೂ ನಿಯಂತ್ರಣ ಸಂಸ್ಥೆಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ನ್ಯಾಯಾಲಯವು ದಾಖಲೆಯಲ್ಲಿರುವ ವಿಷಯವನ್ನು ಪರಿಗಣಿಸಿದ ನಂತರ, ಐಪಿಸಿ, ಭ್ರಷ್ಟಾಚಾರ ತಡೆ ಕಾಯ್ದೆ, ಸೆಬಿ ಕಾಯ್ದೆ ಮತ್ತು ಇತರ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಮುಂಬೈ ವಲಯದ ಎಸಿಬಿಗೆ ನಿರ್ದೇಶಿಸಿದೆ.

ಬುಚ್‌ ಸೇರಿದಂತೆ ಬಿಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಂದರರಾಮ ರಾಮಮೂರ್ತಿ, ಅಧ್ಯಕ್ಷ ಪ್ರಮೋದ್ ಅಗರ್ವಾಲ್, ಸೆಬಿಯ ಪೂರ್ಣಕಾಲಿಕ ಸದಸ್ಯರಾದ ಅಶ್ವನಿ ಭಾಟಿಯಾ, ಜಿ. ಅನಂತ್ ನಾರಾಯಣ ಹಾಗೂ ಕಮಲೇಶ್ ಚಂದ್ರ ವಿರುದ್ಧ ಎಫ್‌ಐಆರ್‌ ದಾಖಲಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.

ನ್ಯಾಯಾಲಯವು ತನಿಖೆಯ ಮೇಲ್ವಿಚಾರಣೆ ನಡೆಸಲಿದ್ದು, 30 ದಿನದೊಳಗೆ ಪ್ರಕರಣದ ಸ್ಥಿತಿಗತಿ ಬಗ್ಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.

ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿಯು ಪಾಲುದಾರಿಕೆ ಹೊಂದಿದ್ದಾರೆ ಎಂದು ಅಮೆರಿಕದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್ ರಿಸರ್ಚ್‌ ಆರೋಪಿಸಿತ್ತು. ಇದನ್ನು ಈ ಇಬ್ಬರು ನಿರಾಕರಿಸಿದ್ದರು. ಮಾಧವಿ ಅವರ ಮೂರು ವರ್ಷದ ಅಧಿಕಾರಾವಧಿಯು ಶುಕ್ರವಾರ ಮುಕ್ತಾಯಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.