ADVERTISEMENT

ಪೇಟೆಯಲ್ಲಿ ಸಕಾರಾತ್ಮಕ ವಹಿವಾಟು

ಪಿಟಿಐ
Published 19 ಜನವರಿ 2019, 19:45 IST
Last Updated 19 ಜನವರಿ 2019, 19:45 IST
bse
bse   

ಮುಂಬೈ: ದೇಶದ ಷೇರುಪೇಟೆಗಳ ವಾರದ ವಹಿವಾಟು ಸಕಾರಾತ್ಮಕ ಮಟ್ಟದಲ್ಲಿ ಅಂತ್ಯವಾಗಿದೆ. ಐದು ದಿನಗಳ ವಹಿವಾಟು ಅವಧಿಗಳಲ್ಲಿ ನಾಲ್ಕು ದಿನಗಳಲ್ಲಿ ಸೂಚ್ಯಂಕಗಳು ಏರಿಕೆ ಕಂಡುಕೊಂಡಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ)35,853 ಅಂಶಗಳಲ್ಲಿ ವಾರದ ವಹಿವಾಟು ಆರಂಭಗೊಂಡಿತು.ಒಟ್ಟಾರೆ 377 ಅಂಶ ಏರಿಕೆಯೊಂದಿಗೆ, 36,386 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಕೈಗಾರಿಕಾ ಪ್ರಗತಿ (ಐಐಪಿ) ನವೆಂಬರ್‌ನಲ್ಲಿ 17 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಇದರ ಪ್ರಭಾವಕ್ಕೆ ಒಳಗಾಗಿ ಸೋಮವಾರ ಸಂವೇದಿ ಸೂಚ್ಯಂಕ 156 ಅಂಶ ಇಳಿಕೆ ಕಂಡಿತ್ತು.

ADVERTISEMENT

ಡಿಸೆಂಬರ್‌ ತಿಂಗಳ ಚಿಲ್ಲರೆ ಹಣದುಬ್ಬರ 18 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದು, ಆರ್‌ಬಿಐನಿಂದ ಬಡ್ಡಿದರ ಕಡಿತದ ನಿರೀಕ್ಷೆ ವ್ಯಕ್ತವಾಗಿದೆ. ಈ ಸುದ್ದಿಯಿಂದ ಮಂಗಳವಾರ ಸೂಚ್ಯಂಕ 464 ಅಂಶ ಜಿಗಿತ ಕಂಡಿತ್ತು.

ಬುಧವಾರದ ‌ 3 ಅಂಶ, ಗುರುವಾರ 53 ಅಂಶ ಹಾಗೂ ಶುಕ್ರವಾರ 12 ಅಂಶ‌ಗಳಷ್ಟು ಅಲ್ಪ ಏರಿಕೆ ಕಂಡಿತು.

ವ್ಯಾಪಾರ ಕೊರತೆ ಅಂತರ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಇದು ಸಹ ಸಕಾರಾತ್ಮಕ ವಹಿವಾಟು ಮುಂದುವರಿಯುವಂತೆ ಮಾಡಿತು.

ತ್ರೈಮಾಸಿಕ ಫಲಿತಾಂಶದಲ್ಲಿ, ರಿಲಯನ್ಸ್‌ ಇಂಡಸ್ಟ್ರೀಸ್‌ ನಿವ್ವಳ ಲಾಭ ₹ 10,251 ಕೋಟಿಗೆ ತಲುಪಿದೆ. ಇದರಿಂದ ಶುಕ್ರವಾರ ಕಂಪನಿ ಷೇರುಗಳು ಶೇ 4.43ರಷ್ಟು ಏರಿಕೆ ಕಂಡಿವೆ. ಐ.ಟಿ, ತಂತ್ರಜ್ಞಾನ, ತೈಲ ಮತ್ತು ಅನಿಲ, ರಿಯಲ್ ಎಸ್ಟೇಟ್‌ ಹಾಗೂ ಗ್ರಾಹಕ ಬಳಕೆ ವಸ್ತುಗಳ ವಲಯಗಳ ಷೇರುಗಳು ಏರಿಕೆ ಕಂಡುಕೊಂಡಿವೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 112 ಅಂಶ ಹೆಚ್ಚಾಗಿ 10,906 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.