ADVERTISEMENT

ಆರ್ಥಿಕ ಸಂಕಷ್ಟ, ಷೇರುಪೇಟೆ ನಷ್ಟ

ಹಣಕಾಸು, ವಾಹನ ವಲಯದ ಷೇರುಗಳಲ್ಲಿ ಹೆಚ್ಚಿದ ಮಾರಾಟದ ಒತ್ತಡ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 19:37 IST
Last Updated 3 ಸೆಪ್ಟೆಂಬರ್ 2019, 19:37 IST
.
.   

ಮುಂಬೈ: ಆರ್ಥಿಕ ಹಿಂಜರಿತದ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವುದು ಮತ್ತು ಕೊನೆಗಾಣದ ಜಾಗತಿಕ ವಾಣಿಜ್ಯ ಸಂಘರ್ಷದಿಂದಾಗಿ ಹೂಡಿಕೆದಾರರು ದಿಗಿಲುಗೊಂಡು ಮಾರಾಟಕ್ಕೆ ಮುಗಿಬಿದ್ದಿದ್ದಾರೆ. ಇದರಿಂದಾಗಿ ‌‌‌ಷೇರುಪೇಟೆಯ ಸಂವೇದಿ ಸೂಚ್ಯಂಕಗಳು ಮಂಗಳವಾರದ ವಹಿವಾಟಿನಲ್ಲಿ ದಾಖಲೆ ಮಟ್ಟದಲ್ಲಿ ಕುಸಿತ ಕಂಡವು.

ಮಂದಗತಿಯ ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ವಲಯದ ಕುಂಠಿತ ಪ್ರಗತಿ, ವಾಹನ ಉದ್ಯಮದ ಮಾರಾಟ ಕುಸಿತದಂತಹ ಪ್ರತಿಕೂಲ ವಿದ್ಯಮಾನಗಳು ದೇಶಿ ಆರ್ಥಿಕತೆಯ ಸಂಕಷ್ಟವನ್ನು ದಿನೇ ದಿನೇ ಹೆಚ್ಚಿಸುತ್ತಿವೆ. ಹೀಗಾಗಿ ಬಂಡವಾಳ ಪೇಟೆಯು ಹೂಡಿಕೆದಾರರ ವಿಶ್ವಾಸಕ್ಕೆ ಎರವಾಗುತ್ತಿದೆ. ಬ್ಯಾಂಕಿಂಗ್‌ ಮತ್ತು ವಾಹನ ತಯಾರಿಕಾ ಕಂಪನಿಗಳ ಷೇರುಗಳಲ್ಲಿ ಭಾರಿ ಪ್ರಮಾಣದ ಮಾರಾಟ ಒತ್ತಡ ಕಂಡು ಬರುತ್ತಿದೆ.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕವು 770 ಅಂಶಗಳಷ್ಟು ಕುಸಿತ ಕಂಡು 36,563 ಅಂಶಗಳಿಗೆ ಇಳಿಕೆಯಾಯಿತು. ದಿನದ ವಹಿವಾಟಿನ ಒಂದು ಹಂತದಲ್ಲಿ ಸೂಚ್ಯಂಕವು 867 ಅಂಶಗಳಷ್ಟು ಕುಸಿತ ದಾಖಲಿಸಿತ್ತು. ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ ಸಹ 225 ಅಂಶ ಇಳಿಕೆ ಕಂಡು 10,797 ಅಂಶಗಳಿಗೆ ತಲುಪಿತು.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಪ್ರಮಾಣದ ಉದ್ಯೋಗ ಮಟ್ಟ ಮತ್ತು ನಗದು ಕೊರತೆಯಿಂದಾಗಿ ಖರೀದಿ ಸಾಮರ್ಥ್ಯದಲ್ಲಿ ಇಳಿಕೆಯಾಗಿದೆ. ಈ ಬಿಕ್ಕಟ್ಟು ಬಗೆಹರಿಸಲು ತಕ್ಷಣವೇ ಕ್ರಮ ಕೈಗೊಳ್ಳಬೇಕಾಗಿದೆ’ ಎಂದು ಎಂಕೆ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಮುಖ್ಯ ಸಂಶೋಧಕ ಜೋಸೆಫ್‌ ಥಾಮಸ್‌ ಹೇಳಿದ್ದಾರೆ.

ಕರಗಿದ ₹ 2.56 ಲಕ್ಷ ಕೋಟಿ ಸಂಪತ್ತು

ಸೂಚ್ಯಂಕಗಳು ಭಾರಿ ಕುಸಿತ ಕಂಡಿರುವುದರಿಂದ ದಿನದ ವಹಿವಾಟಿನಲ್ಲಿ, ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಹೂಡಿಕೆದಾರರ ಸಂಪತ್ತು ₹ 2.56 ಲಕ್ಷ ಕೋಟಿಗಳಷ್ಟು ಕರಗಿದೆ. ಷೇರುಪೇಟೆಯ ಮಾರುಕಟ್ಟೆ ಮೌಲ್ಯ ₹ 138.42 ಲಕ್ಷ ಕೋಟಿಗೆ ಇಳಿಕೆಯಾಗಿದೆ.

ರೂಪಾಯಿ 97 ಪೈಸೆ ಇಳಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಮಂಗಳವಾರ 97 ಪೈಸೆ ಕುಸಿತ ಕಂಡು ಒಂದು ಡಾಲರ್‌ಗೆ ₹ 72.39ರಂತೆ ವಿನಿಮಯಗೊಂಡಿತು.

2018ರ ನವೆಂಬರ್‌ 13ರ ನಂತರ ದಾಖಲಾಗಿರುವ ಅತ್ಯಂತ ಕನಿಷ್ಠ ಮಟ್ಟದ ವಹಿವಾಟಿನ ಅಂತ್ಯ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.