ADVERTISEMENT

ಷೇರುಪೇಟೆ: ಗೂಳಿ ನಾಗಾಲೋಟ

ಸೆನ್ಸೆಕ್ಸ್‌ 874, ನಿಫ್ಟಿ 345 ಅಂಶ ಏರಿಕೆ

ಪಿಟಿಐ
Published 7 ಆಗಸ್ಟ್ 2024, 16:22 IST
Last Updated 7 ಆಗಸ್ಟ್ 2024, 16:22 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಸತತ ಮೂರು ದಿನಗಳಿಂದ ಇಳಿಕೆ ಕಂಡಿದ್ದ ದೇಶದ ಷೇರುಪೇಟೆಗಳಲ್ಲಿ ಬುಧವಾರ ಗೂಳಿಯ ನಾಗಾಲೋಟದಿಂದಾಗಿ ಷೇರು ಸೂಚ್ಯಂಕಗಳು ಏರಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 874 ಅಂಶ ಏರಿಕೆ (ಶೇ 1.11ರಷ್ಟು) ಕಂಡು 79,468 ಅಂಶಗಳಲ್ಲಿ ಸ್ಥಿರಗೊಂಡಿತು. ವಹಿವಾಟಿನ ಒಂದು ಹಂತದಲ್ಲಿ 1,046 ಅಂಶ ಏರಿಕೆ ಕಂಡಿತ್ತು. 

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 304 ಅಂಶ ಏರಿಕೆ (ಶೇ 1.27ರಷ್ಟು) ಕಂಡು 24,297 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತು. ಇಂಟ್ರಾಡೇನಲ್ಲಿ 345 ಅಂಶ ಏರಿಕೆ ಕಂಡಿತ್ತು.

ADVERTISEMENT

ಸೆನ್ಸೆಕ್ಸ್‌ ಗುಚ್ಛದಲ್ಲಿ ಅದಾನಿ ಪೋ‌ರ್ಟ್ಸ್‌ ಮತ್ತು ಪವರ್‌ ಗ್ರಿಡ್ ಷೇರಿನ ಮೌಲ್ಯದಲ್ಲಿ ಶೇ 3ರಷ್ಟು ಏರಿಕೆಯಾಗಿದೆ. ಟಾಟಾ ಸ್ಟೀಲ್‌, ಜೆಎಸ್‌ಡಬ್ಲ್ಯು ಸ್ಟೀಲ್‌, ಇನ್ಫೊಸಿಸ್‌, ಮಹೀಂದ್ರ ಆ್ಯಂಡ್‌ ಮಹೀಂದ್ರ, ಎಲ್‌ ಆ್ಯಂಡ್‌ ಟಿ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗಿದೆ.

ಇಂಡಸ್‌ ಇಂಡ್‌ ಬ್ಯಾಂಕ್‌, ಭಾರ್ತಿ ಏರ್‌ಟೆಲ್‌, ಹಿಂದುಸ್ತಾನ್‌ ಯೂನಿಲಿವರ್‌, ಟೆಕ್‌ ಮಹೀಂದ್ರ ಮತ್ತು ಟೈಟನ್ ಷೇರಿನ ಮೌಲ್ಯದಲ್ಲಿ ಇಳಿಕೆಯಾಗಿದೆ. 

‘ಮತ್ತೆ ಬಡ್ಡಿದರ ಏರಿಕೆ ಮಾಡುವುದಿಲ್ಲ ಎಂದು ಬ್ಯಾಂಕ್‌ ಆಫ್‌ ಜಪಾನ್‌ನ ಡೆ‍ಪ್ಯುಟಿ ಗವರ್ನರ್‌ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರವು ಪುನಃ ಇನ್‍ಡೆಕ್ಸೇಷನ್‍ ಪ್ರಯೋಜನ ಪಡೆಯಲು ಅವಕಾಶ ಕಲ್ಪಿಸಿದೆ. ಇದರಿಂದ ರಿಯಾಲ್ಟಿ ವಲಯಕ್ಕೆ ಪರಿಹಾರ ಸಿಕ್ಕಿದಂತಾಗಿದೆ. ಇದು ದೇಶೀಯ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯಲು ನೆರವಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ (ಸಂಶೋಧನಾ ವಿಭಾಗ) ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ. 

ಸೋಲ್‌, ಶಾಂಘೈ ಮತ್ತು ಹಾಂಗ್‌ಕಾಂಗ್ ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆದಿದೆ. ಯುರೋಪಿಯನ್ ಮಾರುಕಟ್ಟೆಯೂ ಏರಿಕೆ ದಾಖಲಿಸಿದೆ. 

ಮಂಗಳವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ₹3,531 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು (ಡಿಐಐ) ₹3,357 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್‌ ಕಚ್ಚಾ ತೈಲದ ದರವು ಶೇ 1.12ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‌ಗೆ 77.34 ಡಾಲರ್‌ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.