ADVERTISEMENT

ಕ್ರಿಪ್ಟೊ ಕರೆನ್ಸಿ ವಹಿವಾಟಿಗೆ ಸುಪ್ರೀಂ ಸಮ್ಮತಿ: 2018ರ ಆರ್‌ಬಿಐ ನಿಷೇಧ ತೆರವು 

ಏಜೆನ್ಸೀಸ್
Published 4 ಮಾರ್ಚ್ 2020, 6:39 IST
Last Updated 4 ಮಾರ್ಚ್ 2020, 6:39 IST
ಕ್ರಿಪ್ಟೊ ಕರೆನ್ಸಿಗಳು
ಕ್ರಿಪ್ಟೊ ಕರೆನ್ಸಿಗಳು   
""

ನವದೆಹಲಿ:ಕ್ರಿಪ್ಟೊ ಕರೆನ್ಸಿ (ಡಿಜಿಟಲ್‌ ಕರೆನ್ಸಿ) ವಹಿವಾಟಿಗೆ 2018ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ವಿಧಿಸಿದ್ದ ನಿಷೇಧವನ್ನು ಸುಪ್ರೀಂ ಕೋರ್ಟ್‌ ಬುಧವಾರ ತೆರವುಗೊಳಿಸಿದೆ.

ಕ್ರಿಪ್ಟೊ ಕರೆನ್ಸಿಗೆ ಆರ್‌ಬಿಐ ವಿಧಿಸಿದ್ದ ನಿಷೇಧ ಪ್ರಶ್ನಿಸಿ ಇಂಟರ್‌ನೆಟ್‌ ಆ್ಯಂಡ್‌ ಮೊಬೈಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಐಎಂಎಐ) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.ಸುಪ್ರೀಂ ಕೋರ್ಟ್‌ ಆದೇಶದಿಂದಾಗಿ 'ಬಿಟ್‌ಕಾಯಿನ್‌' (Bitcoin) ರೀತಿಯ ವರ್ಚ್ಯುವಲ್‌ ಕರೆನ್ಸಿ ಮೂಲಕ ದೇಶದಲ್ಲಿ ವಹಿವಾಟು ಸಾಧ್ಯತೆಗಳು ತೆರೆದು ಕೊಳ್ಳಲಿವೆ.

ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ಅನಿರುದ್ಧ ಬೋಸ್‌ ಹಾಗೂ ವಿ.ರಾಮಸುಬ್ರಮಣಿಯನ್‌ ಅವರನ್ನು ಒಳಗೊಂಡ ನ್ಯಾಯಪೀಠವು ಆರ್‌ಬಿಐ ನಿಷೇಧ ತೆರವುಗೊಳಿಸಿ ತೀರ್ಪು ನೀಡಿದೆ. ಕ್ರಿಪ್ಟೊ ಕರೆನ್ಸಿ ಸಹಜ ಕರೆನ್ಸಿ ಅಲ್ಲ, ಬಹುತೇಕ ಸರಕುಗಳಂತೆ ವರ್ತಿಸುವ ಅವುಗಳ ಬಳಕೆಗೆ ನಿಷೇಧ ಹೇರಲು ಆರ್‌ಬಿಐಗೆ ಅಧಿಕಾರ ಇಲ್ಲ ಎಂದು ಐಎಂಎಐ ವಾದಿಸಿತ್ತು.

ADVERTISEMENT

2018ರ ಏಪ್ರಿಲ್‌ನಲ್ಲಿ ಆರ್‌ಬಿಐ, ವರ್ಚ್ಯುವಲ್‌ ಕರೆನ್ಸಿಗಳ ಬಳಕೆ ಆಸಕ್ತಿ ಕುಗ್ಗಿಸುವ ನಿಟ್ಟಿನಲ್ಲಿ ನಿಯಮಗಳನ್ನು ಬಿಗಿಗೊಳಿಸಿತ್ತು. ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳುಕ್ರಿಪ್ಟೊ ಕರೆನ್ಸಿಗಳಿಗೆ ಸಂಬಂಧಿಸಿದಂತೆ ಯಾವುದೇ ಸೇವೆ ಒದಗಿಸಿದಂತೆ ನಿಷೇಧ ವಿಧಿಸಿತ್ತು.

ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯ ಕ್ರಿಪ್ಟೊ ಕರೆನ್ಸಿ 'ಬಿಟ್‌ಕಾಯಿನ್‌'. ಪ್ರಸ್ತುತ 1 ಬಿಟ್‌ಕಾಯಿನ್‌ ಮೌಲ್ಯ ಅಮೆರಿಕದ ಡಾಲರ್‌ ಎದುರು8,835 ಡಾಲರ್‌ ವರೆಗೂ ಏರಿಕೆಯಾಗಿದೆ. 1 ಬಿಟ್‌ಕಾಯಿನ್‌ಗೆ6.49 ಲಕ್ಷಭಾರತದ ರೂಪಾಯಿ ಮೌಲ್ಯ ಹೊಂದಿದೆ.

ಭೌತಿಕವಾಗಿ ಕಾಣಲು ಸಿಗದ, ಬಳಕೆಯಲ್ಲಿರದ ಮತ್ತು ಡಿಜಿಟಲ್‌ ಅಥವಾ ವರ್ಚ್ಯುವಲ್‌ ಆದ ಖಾಸಗಿ ಕರೆನ್ಸಿಗಳ ಬಳಕೆಯಿಂದ ದೇಶದ ಹಣಕಾಸು ವ್ಯವಸ್ಥೆಯನ್ನು ರಕ್ಷಿಸಲು ಸರ್ಕಾರ ಪ್ರಯತ್ನಿಸಿತ್ತು. ಕಾಯ್ದೆ ಮೂಲಕ ಕ್ರಿಪ್ಟೊ ಕರೆನ್ಸೆ ಬಳಕೆ ಕಾನೂನು ಬಾಹಿರಗೊಳಿಸುವ ಮಸೂದೆ ಸಿದ್ಧಪಡಿಸಲಾಗಿತ್ತು.

ಕ್ರಿಪ್ಟೊ ಕರೆನ್ಸಿ ಬಳಕೆ ನಿರ್ಬಂಧಿಸಲು, ಅವುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದವರಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕಾಯ್ದೆ ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿತ್ತು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವದಲ್ಲಿನ ಉನ್ನತ ಮಟ್ಟದ ಸಮಿತಿಯು ಕರಡು ಮಸೂದೆ ಸಿದ್ಧಪಡಿಸಿತ್ತು.

ಬಿಟ್‌ಕಾಯಿನ್‌ ಜೊತೆಗೆ ಇತರೆ ಕ್ರಿಪ್ಟೊ ಕರೆನ್ಸಿಗಳು ಸಹ ವಹಿವಾಟು ಮೌಲ್ಯ ಹೆಚ್ಚಳ ಕಂಡಿವೆ. ಎಥೆರಿಯಮ್‌ ಎರಡು ಪಟ್ಟಿಗೂ ಹೆಚ್ಚು ಹಾಗೂ ರಿಪಲ್ಸ್‌XRP ಶೇ 75ರಷ್ಟು ಏರಿಕೆಯಾಗಿದೆ. 11 ವರ್ಷಗಳಲ್ಲಿ 1,600ಕ್ಕೂ ಹೆಚ್ಚುಕ್ರಿಪ್ಟೊ ಕರೆನ್ಸಿಗಳು ಸೃಷ್ಟಿಯಾಗಿವೆ. ಕೆಲವು ಬಂದಷ್ಟೇ ವೇಗವಾಗಿ ಮರೆಯಾದರೆ, ಇನ್ನೂ ಕೆಲವು ದಿಢೀರ್ ಏರಿಳಿತದ ಬಿರುಗಾಳಿಯಲ್ಲಿ ಸಿಲುಕಿವೆ.

2017ರಲ್ಲಿ ಬಿಟ್‌ಕಾಯಿನ್‌ ಮೌಲ್ಯ 20,000 ಡಾಲರ್‌ ತಲುಪಿತ್ತು. ಆದರೆ, ನಂತರದ ಏಳು ವಾರಗಳಲ್ಲಿ ಶೇ 70ರಷ್ಟು ಕುಸಿತ ಕಂಡಿತು.

ಕ್ರಿಪ್ಟೊ ಕರೆನ್ಸಿಗಳೆಂದರೆ ಡಿಜಿಟಲ್‌ ಕರೆನ್ಸಿಗಳು. ಒಬ್ಬರ ಕರೆನ್ಸಿಯಿಂದ ಅನುಮತಿಯಿಲ್ಲದೆ ಮತ್ತೊಬ್ಬರು ತೆಗೆದುಕೊಳ್ಳಲು ಸಾಧ್ಯವಿರುವುದಿಲ್ಲ. ಎನ್ಕ್ರಿಪ್ಷನ್‌ ತಂತ್ರಜ್ಞಾನ ಬಳಸಿ ಇವುಗಳನ್ನು ಸೃಷ್ಟಿಸಲಾಗುತ್ತದೆ ಹಾಗೂ ವರ್ಗಾವಣೆ, ವಹಿವಾಟು ನಡೆಸಲಾಗುತ್ತದೆ. ಸರ್ಕಾರದ ಸೆಂಟ್ರಲ್‌ ಬ್ಯಾಂಕ್‌ಗಳಿಗೂ ಈ ಕರೆನ್ಸಿಗಳಿಗೂ ವಹಿವಾಟು ಕಾರ್ಯದಲ್ಲಿ ನಿಯಂತ್ರಣವಿರುವುದಿಲ್ಲ. ಕ್ರಿಪ್ಟೊ ಕರೆನ್ಸಿಗಳು ಸ್ವತಂತ್ರವಾಗಿ ವಹಿವಾಟು ನಡೆಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.