ADVERTISEMENT

ತೆರಿಗೆ ಸಂಗ್ರಹ ಏರಿಕೆ: ರಾಜ್ಯದಲ್ಲಿ ಆರ್ಥಿಕ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 20:21 IST
Last Updated 5 ಜನವರಿ 2021, 20:21 IST
ಜಿಎಸ್‌ಟಿ ಸಂಗ್ರಹ–ಪ್ರಾತಿನಿಧಿಕ ಚಿತ್ರ
ಜಿಎಸ್‌ಟಿ ಸಂಗ್ರಹ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೊರೊನಾ ಸಂಕಷ್ಟದಿಂದ ಪಾತಾಳ ಮುಟ್ಟಿದ್ದ ರಾಜ್ಯದ ಆರ್ಥಿಕ ಸ್ಥಿತಿ ಚೇತರಿಸಿಕೊಂಡಿದ್ದು, ಡಿಸೆಂಬರ್‌ನಲ್ಲಿ ಜಿಎಸ್‌ಟಿ (ಸರಕು ಮತ್ತು ಸೇವೆಗಳ ತೆರಿಗೆ) ಸಂಗ್ರಹ, ವಾಣಿಜ್ಯ, ಅಬಕಾರಿ, ಸಾರಿಗೆ, ನೋಂದಣಿ ಮತ್ತು ಮುದ್ರಾಂಕ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿದೆ.

2020 ರ ಇಡೀ ವರ್ಷದ ಬೇರೆ ತಿಂಗಳುಗಳಿಗೆ ಹೋಲಿಸಿದರೆ ಡಿಸೆಂಬರ್‌ನಲ್ಲಿ ಅಧಿಕ ಪ್ರಮಾಣದಲ್ಲಿ ಆದಾಯ ಸಂಗ್ರಹವಾಗಿದೆ. ರಾಜ್ಯ ಸಹಜ ಸ್ಥಿತಿಯತ್ತ ಮರಳುತ್ತಿರುವುದಕ್ಕೆ ಇದು ಸೂಚನೆಯಾಗಿದೆ ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಲಾಕ್‌ಡೌನ್‌ ಅವಧಿಯಲ್ಲಿ ತೆರಿಗೆ ಸಂಗ್ರಹ ಶೂನ್ಯ ತಲುಪಿತ್ತು. ಲಾಕ್‌ಡೌನ್‌ ತೆರವುಗೊಳಿಸಿದ ನಂತರ ತೆರಿಗೆ ಸಂಗ್ರಹ ಪ್ರಮಾಣ ಕಡಿಮೆಯೇ ಇತ್ತು. ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮ ವಹಿಸಿದ್ದರಿಂದ ತೆರಿಗೆ ಮತ್ತು ಜಿಎಸ್‌ಟಿ ಸಂಗ್ರಹ ಏರಿಕೆ ಆಗಿದೆ.

ADVERTISEMENT

ಜಿಎಸ್‌ಟಿ ಸಂಗ್ರಹ:

ಇಡೀ ವರ್ಷದಲ್ಲಿ ಡಿಸೆಂಬರ್‌ನಲ್ಲಿ ಅತಿ ಹೆಚ್ಚು ಸರಕು ಮತ್ತು ಸೇವೆಗಳ ತೆರಿಗೆ ಸಂಗ್ರಹವಾಗಿದೆ. ₹7,459.29 ಕೋಟಿ ಸಂಗ್ರಹವಾಗಿದೆ. ಕಳೆದ ಜೂನ್‌ನಲ್ಲಿ ₹7,452.39 ಕೋಟಿ ಸಂಗ್ರಹವಾಗಿತ್ತು. ಆ ಬಳಿಕ ಪುನಃ ತೆರಿಗೆ ಸಂಗ್ರಹ ಇಳಿಕೆಯಾಗಿತ್ತು. ಮಹಾರಾಷ್ಟ್ರ ಮತ್ತು ಗುಜರಾತ್‌ ನಂತರ ಸ್ಥಾನ ಕರ್ನಾಟಕದ್ದಾಗಿದೆ. ಶೇ 8 ರಷ್ಟು ಬೆಳವಣಿಗೆ ದರ ಇದೆ.

ಅಬಕಾರಿಯಲ್ಲೂ ಆದಾಯ ಇಡೀ ವರ್ಷಕ್ಕೆ ಹೋಲಿಸಿದರೆ ಉತ್ತಮ ಪ್ರಮಾಣದಲ್ಲಿದೆ. ಡಿಸೆಂಬರ್‌ನಲ್ಲಿ ₹2,436.34 ಕೋಟಿ ಬೊಕ್ಕಸಕ್ಕೆ ಬಂದಿದೆ. ವಾಣಿಜ್ಯ ಬಾಬ್ತಿನಿಂದ ₹7,459.29 ಕೋಟಿ, ಮುದ್ರಾಂಕ ಮತ್ತು ನೋಂದಣಿಯಿಂದ ₹1,150 ಕೋಟಿ ಸಂಗ್ರಹವಾಗಿದೆ.

ಸಾರಿಗೆಯಿಂದ ₹553 ಕೋಟಿ ತೆರಿಗೆ ಸಂಗ್ರಹವಾಗಿದೆ. ಅಚ್ಚರಿ ಎಂದರೆ, ಸಾರಿಗೆ ತೆರಿಗೆ ಸಂಗ್ರಹದಲ್ಲಿ 2019 ಡಿಸೆಂಬರ್‌ಗೆ ಹೋಲಿಸಿದರೆ, 2020 ರ ಡಿಸೆಂಬರ್‌ನಲ್ಲಿ ಅಧಿಕ ತೆರಿಗೆ ಸಂಗ್ರಹವಾಗಿದೆ. ವಾಹನ ನೋಂದಣಿ ಪ್ರಮಾಣವೂ ಗಣನೀಯವಾಗಿ ಏರಿಕೆ ಆಗಿರುವುದು ಮಾತ್ರವಲ್ಲದೆ, 6–7 ತಿಂಗಳಿಂದ ಸ್ಥಗಿತಗೊಂಡಿದ್ದ ಪರವಾನಗಿ ನೀಡಿಕೆಯೂ ಹೆಚ್ಚಳವಾಗಿರುವುದೂ ಪ್ರಮುಖ ಕಾರಣ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.

ಆದರೂ ಕಳೆದ ಬಜೆಟ್‌ನಲ್ಲಿ ನಿಗದಿ ಮಾಡಿದ್ದ ತೆರಿಗೆ ಸಂಗ್ರಹ ಗುರಿಯನ್ನು ಮುಟ್ಟುವುದು ಕಷ್ಟ ಎಂದೂ ಹಣಕಾಸು ಇಲಾಖೆಯ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.