ADVERTISEMENT

ಟಿಸಿಎಸ್‌: ಜಗತ್ತಿನ ಅತಿದೊಡ್ಡ ಐ.ಟಿ. ಕಂಪನಿ

ಪಿಟಿಐ
Published 25 ಜನವರಿ 2021, 16:16 IST
Last Updated 25 ಜನವರಿ 2021, 16:16 IST

ನವದೆಹಲಿ: ಮಾಹಿತಿ ತಂತ್ರಜ್ಞಾನ (ಐ.ಟಿ.) ವಲಯದ ಸೇವಾ ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ (ಟಿಸಿಎಸ್‌) ಮಾರುಕಟ್ಟೆ ಮೌಲ್ಯವು ‘ಆ್ಯಕ್ಸೆಂಚರ್‌’ನ ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಾಗಿದೆ. ಈ ಮೂಲಕ ಜಗತ್ತಿನ ಅತಿದೊಡ್ಡ ಐ.ಟಿ. ಕಂಪನಿಯಾಗಿ ಟಿಸಿಎಸ್‌ ಹೊರಹೊಮ್ಮಿದೆ.

ಆ್ಯಕ್ಸೆಂಚರ್‌ ಕಂಪನಿಯ ಮಾರುಕಟ್ಟೆ ಮೌಲ್ಯವು ಶುಕ್ರವಾರದ ಅಂತ್ಯಕ್ಕೆ 168 ಬಿಲಿಯನ್‌ ಡಾಲರ್‌ಗಳಷ್ಟಿತ್ತು. ಸೋಮವಾರ ಟಿಸಿಎಸ್‌ ಮಾರುಕಟ್ಟೆ ಮೌಲ್ಯವು ಡಾಲರ್‌ಗಳ ಲೆಕ್ಕದಲ್ಲಿ 169.26 ಬಿಲಿಯನ್‌ ಡಾಲರ್‌ಗಳಿಗೆ ತಲುಪಿತು.

ಇದೇ ವೇಳೆ, ದೇಶದ ಅತ್ಯಂತ ಮೌಲ್ಯಯುತ ಕಂಪನಿ ಎನ್ನುವ ಹೆಗ್ಗಳಿಕೆಗೂ ಟಿಸಿಎಸ್‌ ಸೋಮವಾರ ಪಾತ್ರವಾಗಿದೆ. ಇದರಿಂದಾಗಿ ಮಾರುಕಟ್ಟೆ ಬಂಡವಾಳದ ಲೆಕ್ಕದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ (ಆರ್‌ಐಎಲ್‌) ಎರಡನೇ ಸ್ಥಾನಕ್ಕೆ ಇಳಿದಿದೆ.

ADVERTISEMENT

ದಿನದ ವಹಿವಾಟಿನ ಅಂತ್ಯದ ವೇಳೆಗೆ ಟಿಸಿಎಸ್‌ ಮಾರುಕಟ್ಟೆ ಮೌಲ್ಯ ₹ 12.34 ಲಕ್ಷ ಕೋಟಿಗಳಿಗೆ ತಲುಪಿತು. ರಿಲಯನ್ಸ್‌ ಮಾರುಕಟ್ಟೆ ಮೌಲ್ಯ ₹ 12.29 ಲಕ್ಷ ಕೋಟಿ.

ಸೋಮವಾರ ಟಿಸಿಎಸ್‌ ಷೇರು ಮೌಲ್ಯ ಶೇ 0.40ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹ 3,290.20ಕ್ಕೆ ತಲುಪಿತು. ದಿನದ ವಹಿವಾಟಿನ ನಡುವಿನಲ್ಲಿ ಶೇ 1.26ರಷ್ಟು ಏರಿಕೆ ಕಾಣುವ ಮೂಲಕ ಒಂದು ವರ್ಷದ ಗರಿಷ್ಠ ಮಟ್ಟವಾದ ₹ 3,345.25ಕ್ಕೆ ತಲುಪಿತ್ತು.

ರಿಲಯನ್ಸ್‌ ಷೇರು ಶೇ 5.36ರಷ್ಟು ಇಳಿಕೆ ಕಂಡು ಪ್ರತಿ ಷೇರಿನ ಬೆಲೆ ₹ 1,939.70ಕ್ಕೆ ತಲುಪಿತು. ಡಿಸೆಂಬರ್‌ ತ್ರೈಮಾಸಿಕದಲ್ಲಿನ ಕಂಪನಿಯ ಗಳಿಕೆಯು ಹೂಡಿಕೆದಾರರನ್ನು ಆಕರ್ಷಿಸಲು ವಿಫಲವಾಗಿದ್ದರಿಂದ ಷೇರಿನ ಬೆಲೆಯಲ್ಲಿ ಇಳಿಕೆ ಆಗಿದೆ.

ಕಳೆದ ವರ್ಷದ ಮಾರ್ಚ್‌ನಲ್ಲಿಯೂ ಟಿಸಿಎಸ್‌ ಕಂಪನಿಯು ದೇಶದ ಅತ್ಯಂತ ಮೌಲ್ಯಯುತ ಕಂಪನಿಯ ಸ್ಥಾನಕ್ಕೆ ಏರಿತ್ತು. ಬಿಎಸ್‌ಇಯಲ್ಲಿ ಈ ತಿಂಗಳಿನಲ್ಲಿ ಕಂಪನಿಯ ಷೇರು ಶೇ 13ರಷ್ಟು ಗಳಿಕೆ ಕಂಡುಕೊಂಡಿದೆ.

ಕಂಪನಿಗಳ ಮಾರುಕಟ್ಟೆ ಬಂಡವಾಳವು ಪ್ರತಿದಿನವೂ ಅವುಗಳ ಷೇರುಗಳ ಬೆಲೆಯಲ್ಲಿ ಆಗುವ ಏರಿಳಿತದ ಆಧರಿಸಿ ವ್ಯತ್ಯಾಸವಾಗುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.