ADVERTISEMENT

ಟಿಸಿಎಸ್‌ ಲಾಭ ಶೇ 17ರಷ್ಟು ಹೆಚ್ಚಳ

ಪಿಟಿಐ
Published 13 ಜುಲೈ 2023, 4:15 IST
Last Updated 13 ಜುಲೈ 2023, 4:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ : ಸಾಫ್ಟ್‌ವೇರ್ ಸೇವೆಗಳನ್ನು ಒದಗಿಸುವ ದೇಶದ ಅತಿದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), ಜೂನ್‌ ತ್ರೈಮಾಸಿಕದಲ್ಲಿ ₹11,074 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭ ಶೇ 16.83ರಷ್ಟು ಏರಿಕೆ ಕಂಡಿದೆ.

ಹಿಂದಿನ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಕಂಪನಿಯು ನಿವ್ವಳ ಲಾಭ ₹9,478 ಕೋಟಿ ಇತ್ತು.

ಲಾಭವು ₹ 8,938 ಕೋಟಿ ಆಗಲಿದೆ ಎಂದು ರಿಫಿನಿಟಿವ್‌ ಐಬಿಇಎಸ್‌ ಅಂದಾಜು ಮಾಡಿತ್ತು. ಆದರೆ, ಕಂಪನಿಯ ಲಾಭವು ಅಂದಾಜನ್ನು ಮೀರಿದೆ.

ADVERTISEMENT

ಕಂಪನಿಯ ಕಾರ್ಯಾಚರಣಾ ವರಮಾನ ಶೇ 12.55ರಷ್ಟು ಹೆಚ್ಚಾಗಿ ₹59,381 ಕೋಟಿಗೆ ತಲುಪಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ಇದ್ದ ₹59,162 ಕೋಟಿಗೆ ಹೋಲಿಸಿದರೆ ಅಲ್ಪ ಏರಿಕೆ ಕಂಡಿದೆ. ಕಂಪನಿಯು ಜೂನ್‌ ತ್ರೈಮಾಸಿಕದಲ್ಲಿ ಹೊಸದಾಗಿ ನೇಮಿಸಿಕೊಂಡ ಉದ್ಯೋಗಿಗಳ ನಿವ್ವಳ ಸಂಖ್ಯೆ 523. ಕಂಪನಿಯ ಒಟ್ಟು ಸಿಬ್ಬಂದಿ ಸಂಖ್ಯೆಯು 6.15 ಲಕ್ಷಕ್ಕೆ ತಲುಪಿದೆ. ಕಂಪನಿ ಬಿಟ್ಟು ಹೋಗುತ್ತಿರುವವರ ಪ್ರಮಾಣವು ಶೇ 17.8ರಷ್ಟು ಇದೆ.

ಕಂಪನಿಗೆ ಲೈಫ್‌ ಸೈನ್ಸಸ್‌ ಮತ್ತು ಆರೋಗ್ಯಸೇವಾ ವಿಭಾಗದಿಂದ ಬರುವ ವರಮಾನ ಶೇ 10.1ರಷ್ಟು ಬೆಳವಣಿಗೆ ಕಂಡಿದ್ದರೆ, ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮೆಯಿಂದ ಬರುವ ವರಮಾನವು ಶೇ 3ರಷ್ಟು ಮಾತ್ರವೇ ಬೆಳವಣಿಗೆ ಕಂಡಿದೆ.

ಕಂಪನಿಯು ವರಮಾನ ಗಳಿಕೆಯಲ್ಲಿ ಬ್ರಿಟನ್ ಪಾಲು ಶೇ 16.1ರಷ್ಟು ಇದ್ದರೆ, ಉತ್ತರ ಅಮೆರಿಕದ ಪಾಲು ಶೇ 4.6ರಷ್ಟು ಆಗಿದೆ.

ವರಮಾನದಲ್ಲಿ ಹೆಚ್ಚಿನ ಪಾಲು ಹೊಂದಿರುವ ಉತ್ತರ ಅಮೆರಿಕದ ಮಾರುಕಟ್ಟೆ, ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮೆ (ಬಿಎಫ್‌ಎಸ್‌ಐ) ವಿಭಾಗದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಿದೆ. ಅಮೆರಿಕದಲ್ಲಿ ಹಣದುಬ್ಬರ ನಿಯಂತ್ರಿಸಲು ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಳ ಮಾಡುತ್ತಿರುವ ಬೆನ್ನಲ್ಲೇ ಅಲ್ಲಿನ ಕೆಲವು ಬ್ಯಾಂಕ್‌ಗಳಲ್ಲಿ ಆಸ್ತಿ–ಹೊಣೆಗಾರಿಕೆಯ ಲೆಕ್ಕಾಚಾರ ತಾಳೆ ಆಗದೇ ನಷ್ಟ ಅನುಭವಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.