ADVERTISEMENT

ಜೀವವಿಮೆ ಪಾಲಿಸಿ ರದ್ದು ಬೇಡ

ಸಂತೋಷ್‌ ಅಗರ್ವಾಲ್‌
Published 7 ಜನವರಿ 2020, 19:30 IST
Last Updated 7 ಜನವರಿ 2020, 19:30 IST
ಜೀವವಿಮೆ
ಜೀವವಿಮೆ   

‘ಜೀವವಿಮೆ ಮುಖ್ಯವಲ್ಲದ ವಿಚಾರ’ ಎಂದು ಈ ಕ್ಷಣದಲ್ಲಿ ಅನಿಸಬಹುದು. ಆದರೆ ಅದು ಅತ್ಯಂತ ಮೌಲ್ಯಯುತ ಹೂಡಿಕೆ ಎಂಬುದು ಸ್ವಲ್ಪ ಕಾಲದ ನಂತರ ಮನವರಿಕೆಯಾಗುತ್ತದೆ. ಬ್ಯಾಂಕ್‌ ಖಾತೆಯಲ್ಲಿ, ಕಿಸೆಯಲ್ಲಿ ಸ್ವಲ್ಪ ಹಣ ಉಳಿಯಲಿ ಎಂದು ಜೀವವಿಮೆ ಪಾಲಿಸಿ ರದ್ದುಮಾಡಲು ಮುಂದಾದರೆ, ಅದು ನೀವು ಮಾಡುವ ಅತ್ಯಂತ ದುಬಾರಿ ತಪ್ಪಾಗಬಹುದು.

ಹಣದುಬ್ಬರ ಏರು ಹಂತದಲ್ಲಿದೆ, ಗಳಿಕೆ ಕಡಿಮೆಯಾಗುತ್ತಿದೆ, ನಿರುದ್ಯೋಗ ಹೆಚ್ಚುತ್ತಿದೆ, ಬೆಲೆಗಳು ಗಗನಕ್ಕೇರಿವೆ... ಇಂಥ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬರ ಮತ್ತು ಪ್ರತಿಯೊಂದು ಕುಟುಂಬಗಳ ತಿಂಗಳ, ವಾರ್ಷಿಕ ಬಜೆಟ್‌ ಸಹ ಏರುಪೇರಾಗುತ್ತದೆ. ಕುಂಠಿತ ಆರ್ಥಿಕ ಪ್ರಗತಿಯ ಬಿಸಿಯು ಕುಟುಂಬಗಳಿಗೆ ತಟ್ಟಲು ಆರಂಭವಾದಾಗ ಕೆಲವು ಖರ್ಚು ವೆಚ್ಚಗಳನ್ನು ಕಡಿತಗೊಳಿಸಲು ಮುಂದಾಗುವುದು ಸಹಜ. ಆದರೆ, ಒಂದು ಮಾತನ್ನು ಮರೆಯದೆ ನೆನಪಿಡಿ. ಕಡಿತ ಮಾಡುವ ವೆಚ್ಚಗಳ ಪಟ್ಟಿಯಲ್ಲಿ ನಿಮ್ಮ ಜೀವವಿಮೆಯು ಖಂಡಿತವಾಗಿಯೂ ಇರದಂತೆ ನೋಡಿಕೊಳ್ಳಿ.

ನಮ್ಮಲ್ಲಿ ಹೆಚ್ಚಿನವರು ಜೀವವಿಮೆಯನ್ನು ಒಂದು ‘ಅಗತ್ಯ’ ಎಂದು ಪರಿಗಣಿಸಿರುವುದೇ ಇಲ್ಲ. ‘ಜೀವವಿಮೆ ಮುಖ್ಯವಲ್ಲದ ವಿಚಾರ’ ಎಂದು ಈ ಕ್ಷಣದಲ್ಲಿ ಅನಿಸಬಹುದು. ಆದರೆ, ಅದು ಅತ್ಯಂತ ಮೌಲ್ಯಯುತ ಹೂಡಿಕೆ ಎಂಬುದು ಸ್ವಲ್ಪ ಕಾಲದ ನಂತರ ಮನವರಿಕೆಯಾಗುತ್ತದೆ. ಖಾತೆಯಲ್ಲಿ ಸ್ವಲ್ಪ ಹಣ ಉಳಿಯಲಿ ಎಂದು ವಿಮಾ ಪಾಲಿಸಿಯನ್ನು ರದ್ದುಮಾಡಲು ಮುಂದಾದರೆ, ಅದು ನೀವು ಮಾಡುವ ಅತ್ಯಂತ ದುಬಾರಿ ತಪ್ಪಾಗಬಹುದು. ಪಾಲಿಸಿಯನ್ನು ಒಮ್ಮೆ ರದ್ದುಮಾಡಿ ಆರ್ಥಿಕ ಸ್ಥಿತಿ ಸುಧಾರಿಸಿದಾಗ, ಮುಂದಿನ ವರ್ಷ ಮತ್ತೆ ಪಾಲಿಸಿ ಮಾಡಿಸಲು ಮುಂದಾದರೆ ಅದೇ ಪಾಲಿಸಿಗೆ ನೀವು ಹೆಚ್ಚಿನ ಕಂತಿನ ಮೊತ್ತವನ್ನು ನೀಡಬೇಕಾಗುತ್ತದೆ. ಆದ್ದರಿಂದ ವೆಚ್ಚ ಕಡಿತಕ್ಕೆ ಮುಂದಾಗುವಾಗ ತಕ್ಷಣದ ಉಳಿತಾಯವನ್ನು ಮಾತ್ರ ನೋಡಬಾರದು. ದೀರ್ಘಾವಧಿಯ ಲಾಭ-ನಷ್ಟಗಳನ್ನು ತಾಳೆಮಾಡಿ, ಸರಿಯಾದ ನಿರ್ಧಾರಕ್ಕೆ ಬರಬೇಕು. ಜೀವವಿಮೆ ಮಾಡಿಸುವುದು ಯಾವತ್ತಿಗೂ ಒಳ್ಳೆಯ ನಿರ್ಧಾರವೇ ಆಗಿರುತ್ತದೆ. ಆದರೆ ಅದನ್ನು ಕೊನೆಯವರೆಗೂ ಜೀವಂತ ಇರಿಸುವುದು ಅದಕ್ಕೂ ಉತ್ತಮವಾದ ಕ್ರಮವೆನಿಸುತ್ತದೆ. ಜೀವವಿಮೆಯನ್ನು ಯಾಕೆ ರದ್ದು ಮಾಡಬಾರದು ಎಂಬುದಕ್ಕೆ ಇಲ್ಲಿವೆ ಕೆಲ ಕಾರಣಗಳು.

ADVERTISEMENT

ಅನಿರೀಕ್ಷಿತ ಅವಘಡಗಳಿಂದ ರಕ್ಷಣೆ
ಜೀವನ ಯಾವತ್ತೂ ಅನಿಶ್ಚಿತತೆಗಳಿಂದ ಕೂಡಿರುತ್ತದೆ. ಒಂದು ಅನಿರೀಕ್ಷಿತ ಘಟನೆಯು ನಿಮ್ಮನ್ನು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಕುಸಿದು ಹೋಗುವಂತೆ ಮಾಡಬಲ್ಲದು. ಅನಿರೀಕ್ಷಿತವಾಗಿ ಸಾವು ಸಹ ಬರಬಹುದು. ಇಂಥ ಸಂದರ್ಭಗಳಿಂದ ಉಂಟಾಗುವ ಆರ್ಥಿಕ ನಷ್ಟದಿಂದ ರಕ್ಷಣೆ ಪಡೆಯಲು ಜೀವವಿಮೆಯಲ್ಲಿ ಹೂಡಿಕೆ ಮಾಡುವುದು ಅಗತ್ಯ. ವಿಮೆಯು ಕೆಟ್ಟ ಘಟನೆಗಳಿಂದ ರಕ್ಷಣೆ ನೀಡುವುದರ ಜತೆಗೆ ವಿಮೆ ಪಾಲಿಸಿದಾರನು ಆಕಸ್ಮಿಕವಾಗಿ ಮೃತಪಟ್ಟ ಸಂದರ್ಭದಲ್ಲಿ ಆತನ ಕುಟುಂಬದ ಆರ್ಥಿಕ ರಕ್ಷಣೆಗೂ ಸಹಕಾರಿ.

₹ 680ಕ್ಕೆ ₹ 1 ಕೋಟಿಯ ಪಾಲಿಸಿ
ಅವಧಿ ವಿಮಾ ಯೋಜನೆಯು ಇತರ ಹೂಡಿಕೆಯಂತೆ ವಿಮಾದಾರ ಜೀವಂತವಾಗಿರುವಾಗಲೇ ಅವರ ಕುಟುಂಬದವರಿಗೆ ಲಾಭ ತಂದುಕೊಡದಿರಬಹುದು. ಆದರೆ, ಅತ್ಯಂತ ಕಡಿಮೆ ಮೊತ್ತದ ಕಂತು ಕಟ್ಟುವ ಮೂಲಕ ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಹೆಚ್ಚಿನ ಭದ್ರತೆಯನ್ನು ನೀಡಲು ಸಾಧ್ಯವಾಗುತ್ತದೆ. ಅವಧಿ ವಿಮೆಯು ದುಬಾರಿಯಲ್ಲ ಎಂಬುದೇ ಈ ವಿಮೆಯ ಅತ್ಯಂತ ಆಕರ್ಷಕವಾದ ವಿಚಾರವಾಗಿದೆ. ‘ಹೆಚ್ಚು ವಿಮೆ, ಕಂತಿನ ಮೊತ್ತ ಕಡಿಮೆ’ ಎಂಬುದು ಇದರ ವಿಶೇಷತೆಯಾಗಿದೆ.

ಇಂಥ ವಿಮೆಯ ವೆಚ್ಚವು ಆಯ್ಕೆ ಮಾಡಿದ ಯೋಜನೆ ಹಾಗೂ ಇತರ ಕೆಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. 25 ವರ್ಷ ವಯಸ್ಸಿನ ಆರೋಗ್ಯವಂತ ಯುವಕನೊಬ್ಬ ಮಾಸಿಕ ಸುಮಾರು
₹ 600ರಿಂದ ₹ 800ರ ಕಂತಿನಲ್ಲಿ 35 ವರ್ಷ ಅವಧಿಗೆ ₹1 ಕೋಟಿ ಮೊತ್ತದ ‘ಅವಧಿ ಜೀವವಿಮೆ’ಯನ್ನು ಪಡೆಯಬಹುದಾಗಿದೆ. ಆದರೆ, ಎಲ್ಲರಿಗೂ ಇದೇ ಮಾದರಿ ಅನ್ವಯವಾಗಲಾರದು. ವಿಮೆ ಮಾಡಿಸುವವರ ವಯಸ್ಸು, ಆರೋಗ್ಯ ಸ್ಥಿತಿ ಹಾಗೂ ವಿಮಾ ಮೊತ್ತದ ಮೇಲೆ, ಕಟ್ಟಬೇಕಾದ ಕಂತಿನ ಮೊತ್ತ ನಿರ್ಧಾರವಾಗುತ್ತದೆ.

ಕುಟುಂಬದ ಮುಖ್ಯಸ್ಥನು ತನ್ನವರ ಸುಖ ಸಂತೋಷಕ್ಕಾಗಿ ತಮ್ಮ ಜೀವನದ ಅರ್ಧ ಭಾಗವನ್ನೇ ಸವೆಸುತ್ತಾರೆ. ಕುಟುಂಬಕ್ಕಾಗಿ ಸಂಪಾದನೆ ಮಾಡುವ ವ್ಯಕ್ತಿಯು ಅನಿರೀಕ್ಷಿತ ಅವಘಡಕ್ಕೆ ತುತ್ತಾದರೆ ಕುಟುಂಬದವರು ಈಗಿನ ಜೀವನ ಶೈಲಿಯನ್ನೇ ಮುಂದುವರಿಸಬಲ್ಲರೇ ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬರೂ ಕೇಳಿಕೊಳ್ಳ
ಬೇಕಾಗಿದೆ. ಸಾವಿನ ನಂತರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ಯಾರೂ ಬಯಸುವುದಿಲ್ಲ. ಕುಟುಂಬದವರ ಆರ್ಥಿಕ ಅಗತ್ಯಗಳನ್ನು ಈಡೇರಿಸಲು ಪ್ರತಿಯೊಬ್ಬರೂ ಅವಧಿ ಜೀವವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡುವುದು ಅಗತ್ಯ.

(ಲೇಖಕ: ಪಾಲಿಸಿಬಜಾರ್‌ ಡಾಟ್‌ ಕಾಂನ ಜೀವವಿಮಾ ವಿಭಾಗದ ಚೀಫ್‌ ಬಿಸಿನೆಸ್‌ ಆಫೀಸರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.