ADVERTISEMENT

ಟೆಸ್ಲಾ ಕಾರು ಮಾರಾಟ ಶೇ 50 ರಷ್ಟು ಕಡಿಮೆ: ಮಸ್ಕ್‌ ಒಡೆತನದ ಕಂಪನಿಗೆ ಆಗಿದ್ದೇನು?

2022ರಲ್ಲಿ 13 ಲಕ್ಷ ಕಾರು ಮಾರಾಟ ಮಾಡಿದ ಟೆಸ್ಲಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2023, 6:27 IST
Last Updated 3 ಜನವರಿ 2023, 6:27 IST
ಟೆಸ್ಲಾ ಹಾಗೂ ಇಲಾನ್ ಮಸ್ಕ್
ಟೆಸ್ಲಾ ಹಾಗೂ ಇಲಾನ್ ಮಸ್ಕ್   

ವಾಷಿಂಗ್ಟನ್: ಸ್ವಯಂ ಚಾಲಿತ ಎಲೆಕ್ಟ್ರಿಕ್‌ ಕಾರು ಉತ್ಪಾದಕ ಕಂಪನಿ, ವಿಶ್ವದ ನಂಬರ್‌ 2 ಶ್ರೀಮಂತ ಇಲಾನ್‌ ಮಸ್ಕ್‌ ಒಡೆತನದ ಟೆಸ್ಲಾವು, 2022ರಲ್ಲಿ 13 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದಾಗಿ ಹೇಳಿದೆ.

2021ಕ್ಕೆ ಹೋಲಿಕೆ ಮಾಡಿದರೆ ಇದು ಶೇ 40 ರಷ್ಟು ಹೆಚ್ಚು. ಆದರೆ ತಾನು ಇಟ್ಟುಕೊಂಡಿದ್ದ ಗುರಿಗೆ ಹೋಲಿಕೆ ಮಾಡಿದರೆ ಇದು ಶೇ 50 ರಷ್ಟು ಕಡಿಮೆ.

2022ರ ಕೊನೆಯ ಮೂರು ತಿಂಗಳಿನಲ್ಲಿಯೇ ಟೆಸ್ಲಾ ಬರೋಬ್ಬರಿ 4,05,278 ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ 4,31,117 ಕಾರುಗಳು ಮಾರಾಟವಾಗಬಹುದು ಎನ್ನುವ ಅಂದಾಜನ್ನು ವಾಲ್‌ ಸ್ಟ್ರೀಟ್‌ ಮಾಡಿತ್ತು. ಆದರೆ ಆ ಗುರಿ ತಲುಪಲು ಟೆಸ್ಲಾ ವಿಫಲವಾಗಿದೆ.

ADVERTISEMENT

2021ರ ಕೊನೆಯ ತ್ರೈಮಾಸಿಕದಲ್ಲಿ ಟೆಸ್ಲಾವು, 308,600 ಕಾರುಗಳನ್ನು ಡೆಲಿವರಿ ನೀಡಿತ್ತು.

2022ರ ಕೊನೆಯ ತ್ರೈಮಾಸಿಕದಲ್ಲಿ ಟೆಸ್ಲಾವು 4,40,000 ಕಾರುಗಳನ್ನು ತಯಾರಿಸಿತ್ತು. ಅಂದರೆ ಮಾರಾಟವಾದುದ್ದಕ್ಕಿಂತ 34,000 ಹೆಚ್ಚು ಕಾರುಗಳನ್ನು ತಯಾರಿ ಮಾಡಿದೆ.

ಪೂರೈಕೆ ಸರಪಳಿಯಲ್ಲಿ ಉಂಟಾದ ಅಡಚಣೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ.

‘ಉತ್ಪಾದನೆ ಹಾಗೂ ಡೆಲಿವರಿ ನಡುವಿನ ಸಮಯಾವಕಾಶದಿಂದಾಗಿ ಕಾರುಗಳು ಗ್ರಾಹಕರಿಗೆ ತಲುಪುವುದರಲ್ಲಿ ತಡವಾಯ್ತು‘ ಎಂದು ಟೆಸ್ಲಾದ ಹೂಡಿಕೆದಾರರ ಸಂಬಂಧಗಳ ಮುಖ್ಯಸ್ಥ ಮಾರ್ಟಿನ್‌ ವೇಚ್ಚಾ ಹೇಳಿದ್ದಾರೆ.

ಅತೀ ದೊಡ್ಡ ಕಾರು ಮಾರುಕಟ್ಟೆಯಾಗಿರುವ ಚೀನಾದಲ್ಲಿ ಕೋವಿಡ್‌ ಸೋಂಕಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕಠಿಣ ನಿರ್ಬಂಧಗಳು ಜಾರಿಯಲ್ಲಿವೆ. ಇದು ಕೂಡ ಟೆಸ್ಲಾಗೆ ಹಿನ್ನಡೆಯನ್ನುಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.