ADVERTISEMENT

ಚೇತರಿಕೆ ಕಂಡ ಷೇರುಪೇಟೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 21:38 IST
Last Updated 30 ಅಕ್ಟೋಬರ್ 2022, 21:38 IST
   

ಸತತ ಎರಡನೇ ವಾರ ಷೇರುಪೇಟೆ ಸೂಚ್ಯಂಕಗಳು ಜಿಗಿತ ಕಂಡಿವೆ. ಅಕ್ಟೋಬರ್ 28ಕ್ಕೆ ಕೊನೆಗೊಂಡ ವಾರದಲ್ಲಿ ನಿಫ್ಟಿ ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಹೆಚ್ಚಳ ದಾಖಲಿಸಿವೆ. 59,959 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇಕಡ 1.10ರಷ್ಟು ಚೇತರಿಸಿಕೊಂಡಿದೆ. 17,786 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.19ರಷ್ಟು ಸುಧಾರಿಸಿದೆ. ಅಮೆರಿಕದ ಜಿಡಿಪಿ ದತ್ತಾಂಶದಲ್ಲಿ ಚೇತರಿಕೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಡುಬಂದ ಸಕಾರಾತ್ಮಕತೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಉತ್ಸಾಹ, ರೂಪಾಯಿ ಮೌಲ್ಯದಲ್ಲಿ ಅಲ್ಪ ಪ್ರಮಾಣದ ಚೇತರಿಕೆ ಸೇರಿದಂತೆ ಹಲವು ಅಂಶಗಳು ಮಾರುಕಟ್ಟೆ ಗಳಿಕೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕ ಶೇ 5ರಷ್ಟು ಗಳಿಸಿಕೊಂಡಿದೆ. ವಾಹನ ವಲಯ ಶೇ 4ರಷ್ಟು, ಅನಿಲ ಮತ್ತು ತೈಲ ಸೂಚ್ಯಂಕ ಶೇ 3.2ರಷ್ಟು ಹೆಚ್ಚಳ ದಾಖಲಿಸಿವೆ. ನಿಫ್ಟಿ ಎಫ್‌ಎಂಸಿಜಿ ಸೂಚ್ಯಂಕ ಶೇ 0.7ರಷ್ಟು ಕುಸಿದಿದೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 3,986.25 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,240.67 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬಿಎಸ್ಇ ಲಾರ್ಜ್ ಕ್ಯಾಪ್ ಸೂಚ್ಯಂಕದಲ್ಲಿ ಟಾಟಾ ಮೋಟರ್ಸ್ ಡಿವಿಆರ್, ಮಾರುತಿ ಸುಜುಕಿ ಇಂಡಿಯಾ, ಜೆಎಸ್‌ಡಬ್ಲ್ಯೂ ಸ್ಟೀಲ್, ಯುನೈಟೆಡ್ ಸ್ಪಿರಿಟ್ಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಅದಾನಿ ಟೋಟಲ್ ಗ್ಯಾಸ್, ಎನ್‌ಟಿಪಿಸಿ ಮತ್ತು ಲಾರ್ಸನ್ ಆ್ಯಂಡ್ ಟುಬ್ರೊ ಗಳಿಸಿಕೊಂಡಿವೆ.

ADVERTISEMENT

ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕದಲ್ಲಿ ಬ್ಯಾಂಕ್ ಆಫ್ ಇಂಡಿಯಾ, ಎಸ್‌ಜೆವಿಎನ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್, ಇಂದ್ರಪ್ರಸ್ಥ ಗ್ಯಾಸ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪವರ್ ಫೈನಾನ್ಸ್ ಕಾರ್ಪೊರೇಷನ್, ಕೆನರಾ ಬ್ಯಾಂಕ್ ಮತ್ತು ಭಾರತ್ ಫೋರ್ಜ್ ಗಳಿಕೆ ದಾಖಲಿಸಿವೆ. ಗ್ಲ್ಯಾಂಡ್ ಫಾರ್ಮಾ, ಲಾರಸ್ ಲ್ಯಾಬ್ಸ್, ಡೆಲಿವರಿ, ಪೇಜ್ ಇಂಡಸ್ಟ್ರೀಸ್, ಕ್ರಾಂಪ್ಟನ್ ಗ್ರೀವ್ಸ್ ಕನ್ಸ್ಯೂಮರ್ ಎಲೆಕ್ಟ್ರಿಕಲ್ ಮತ್ತು ಟಾಟಾ ಎಲ್ಸಿ ಶೇ 5ರಿಂದ ಶೇ 14ರವರೆಗೆ ಇಳಿಕೆಯಾಗಿವೆ.

ಮುನ್ನೋಟ: ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ಸಮಿತಿಯ ಹೆಚ್ಚುವರಿ ಸಭೆಯೊಂದು ನವೆಂಬರ್ 3ರಂದು ನಡೆಯಲಿದೆ. ಈ ವಾರ ಏರ್‌ಟೆಲ್, ಗೇಲ್, ಎಲ್ಐಸಿ ಹೌಸಿಂಗ್ ಫೈನಾನ್ಸ್, ಅಮೃತಾಂಜನ್, ನೈಕಾ, ಟೈಟನ್, ಜೆ ಕೆ ಪೇಪರ್, ಜೆಕೆ ಟೈಯರ್ಸ್, ಇಂಡಿಗೊ ಪೇಂಟ್ಸ್, ಐಡಿಯಾ, ಸಿಪ್ಲಾ, ಕ್ಯಾಮ್ಸ್, ಬ್ರಿಟಾನಿಯಾ, ಕರ್ಣಾಟಕ ಬ್ಯಾಂಕ್, ಅದಾನಿ ಪೋರ್ಟ್ಸ್, ಟಿವಿಎಸ್ ಮೋಟರ್ಸ್, ಟಾಟಾ ಸ್ಟೀಲ್, ಈಕ್ವಿಟಾಸ್ ಬ್ಯಾಂಕ್ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.