ADVERTISEMENT

ಠೇವಣಿ ಸಂಗ್ರಹ: ಸ್ಪರ್ಧಾತ್ಮಕ ಆಗಬೇಕಿವೆ ಬ್ಯಾಂಕ್‌ಗಳು

ರಾಯಿಟರ್ಸ್
Published 23 ಸೆಪ್ಟೆಂಬರ್ 2022, 14:43 IST
Last Updated 23 ಸೆಪ್ಟೆಂಬರ್ 2022, 14:43 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಬ್ಯಾಂಕ್‌ಗಳು ತಮ್ಮಲ್ಲಿ ಠೇವಣಿ ಪ್ರಮಾಣ ಹೆಚ್ಚಿಸಲು ಇನ್ನಷ್ಟು ಸ್ಪರ್ಧಾತ್ಮಕ ಆಗಬೇಕಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಹಬ್ಬಗಳ ಋತು ಆರಂಭವಾಗಿದ್ದು, ಸಾಲಕ್ಕೆ ಬೇಡಿಕೆ ಜಾಸ್ತಿಯಾಗುತ್ತಿದೆ. ಆದರೆ, ಇದೇ ಹೊತ್ತಿನಲ್ಲಿ ನಗದು ಲಭ್ಯತೆ ಕಡಿಮೆ ಆಗಿದೆ.

ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ನಗದು ಲಭ್ಯತೆಯು ಈ ವಾರದ ಆರಂಭದಲ್ಲಿ 40 ತಿಂಗಳ ಕನಿಷ್ಠ ಮಟ್ಟ ತಲುಪಿದೆ. ಇದಾದ ನಂತರ ಆರ್‌ಬಿಐ, ಬ್ಯಾಂಕಿಂಗ್ ವ್ಯವಸ್ಥೆಗೆ ಹಣ ಬಿಡುಗಡೆ ಮಾಡುವಂತಾಗಿದೆ.

ಆಗಸ್ಟ್‌ 26ಕ್ಕೆ ಕೊನೆಗೊಂಡ ಎರಡು ವಾರಗಳ ಅವಧಿಯಲ್ಲಿ ಬ್ಯಾಂಕ್‌ಗಳು ಸಾಲ ನೀಡುವ ಪ್ರಮಾಣ ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 15.5ರಷ್ಟು ಹೆಚ್ಚಾಗಿದೆ. ಆದರೆ ಅದೇ ಹೊತ್ತಿನಲ್ಲಿ ಠೇವಣಿ ಸ್ವೀಕರಿಸುವ ಪ್ರಮಾಣವು ಶೇ 9.5ರಷ್ಟು ಮಾತ್ರ ಜಾಸ್ತಿ ಆಗಿದೆ.

ADVERTISEMENT

‘ಸಾಲ ನೀಡಿಕೆ ಪ್ರಮಾಣ ಹಾಗೂ ಠೇವಣಿ ಸ್ವೀಕಾರ ಪ್ರಮಾಣದ ನಡುವಿನ ವ್ಯತ್ಯಾಸವು ಒಂದು ಸವಾಲು’ ಎಂದು ಮಕ್ವೂರಿ ಹಣಕಾಸು ಸಂಸ್ಥೆಯ ವಿಶ್ಲೇಷಕ ಸುರೇಶ್ ಗಣಪತಿ ಹೇಳಿದ್ದಾರೆ.

‘ಬ್ಯಾಂಕ್‌ಗಳು ಠೇವಣಿ ಮೆಲಿನ ಬಡ್ಡಿ ಹೆಚ್ಚಿಸಲು ಹಿಂದೇಟು ಹಾಕುತ್ತಿವೆ. ಆದರೆ ಸಾಲದ ಮೇಲಿನ ಬಡ್ಡಿಯನ್ನು ತಕ್ಷಣಕ್ಕೆ ಹೆಚ್ಚಿಸುತ್ತವೆ. ಇದಕ್ಕೆ ಕಾರಣ ಹಣಕಾಸು ವ್ಯವಸ್ಥೆಯಲ್ಲಿದ್ದ ಹೆಚ್ಚಿನ ನಗದು ಲಭ್ಯತೆ. ಈಗ ಪರಿಸ್ಥಿತಿ ಬದಲಾಗಬೇಕಿದೆ. ಇಲ್ಲವಾದರೆ ಆರ್‌ಬಿಐ ಬ್ಯಾಂಕ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತದೆ’ ಎಂದು ಎಲ್‌ಆ್ಯಂಡ್‌ಟಿ ಫೈನಾನ್ಶಿಯಲ್‌ ಹೋಲ್ಡಿಂಗ್ಸ್‌ನ ಮುಖ್ಯ ಅರ್ಥಶಾಸ್ತ್ರಜ್ಞೆ ರೂಪಾ ನಿತ್ಸುರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.