ADVERTISEMENT

ಯಳಂದೂರು: ಟೊಮೆಟೊ ದರ ಕುಸಿತ ಬೆಳೆಗಾರರು ಕಂಗಾಲು

ಕೀಟ ಭಾದೆಗೆ ತುತ್ತಾದ ಟೊಮೆಟೊ: ರಸ್ತೆಗೆ ಸುರಿದ ವ್ಯಾಪಾರಿಗಳು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 23:30 IST
Last Updated 12 ಮಾರ್ಚ್ 2025, 23:30 IST
ಗುಣಮಟ್ಟದ ಟೊಮೆಟೊವನ್ನು ಬೇರ್ಪಡಿಸಿ ಬಾಕ್ಸ್‌ಗೆ ತುಂಬುತ್ತಿರುವ ವ್ಯಾಪಾರಿ
ಗುಣಮಟ್ಟದ ಟೊಮೆಟೊವನ್ನು ಬೇರ್ಪಡಿಸಿ ಬಾಕ್ಸ್‌ಗೆ ತುಂಬುತ್ತಿರುವ ವ್ಯಾಪಾರಿ   

ಯಳಂದೂರು: ಬೇಸಿಗೆ ಅವಧಿಯಲ್ಲಿ ಟೊಮೆಟೊ ಹೆಚ್ಚಿನ ಇಳುವರಿ ಬಂದಿದ್ದು, ಬೇಡಿಕೆ ಕುಸಿದು ರೈತರನ್ನು ಕಂಗೆಡಿಸಿದೆ. ಮತ್ತೊಂದೆಡೆ ರೋಗಕ್ಕೆ ತುತ್ತಾದ ಹಣ್ಣುಗಳನ್ನು ಕೆಲವರು ರಸ್ತೆ ಬದಿಗೆ ಸುರಿದು ನಷ್ಟ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿ ನೂರಾರು ರೈತರು ಹೆಚ್ಚಾಗಿ ತರಕಾರಿ ಬೆಳೆ ಆರಂಭಿಸಿದ್ದಾರೆ. ವಿಶೇಷವಾಗಿ ಟೊಮೆಟೊಗೆ ಆದ್ಯತೆ ನೀಡಿದ್ದು, ಉತ್ತಮವಾಗಿ ಫಸಲು ಬಂದಿದೆ. ಆದರೆ, ಸೂಕ್ತ ಧಾರಣೆ ಸಿಗುತ್ತಿಲ್ಲ. ಅಲ್ಲದೆ, ತಮಿಳುನಾಡು, ಕೇರಳಕ್ಕೆ ಸಾಗಣೆಯಾಗುತ್ತಿದ್ದ ಟೊಮೆಟೊ ಈ ಸಲ ತಗ್ಗಿದ್ದು, ದರ ಕುಸಿಯಲು ಕಾರಣ ಎನ್ನಲಾಗಿದೆ. ಬೆಲೆ ಇಳಿಕೆ ಗ್ರಾಹಕರಿಗೆ ಖುಷಿಯಾದರೂ ಅನ್ನದಾತರಿಗೆ ನಷ್ಟವಾಗಿದೆ. ಇದರಿಂದ ಬೆಳೆ ಕೊಯ್ಲಿನ ಖರ್ಚು ಹೆಚ್ಚಾಗಿ, ಹಣ್ಣು ತಾಕಿನಲ್ಲಿ ಉಳಿಯುತ್ತಿದೆ.

ಪ್ರಸ್ತುತ ಒಂದು ಕೆಜಿ ಟೊಮೆಟೊಗೆ ₹ 5ಕ್ಕೆ ಕುಸಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಕುಸಿದಿದೆ. 1 ಬಾಕ್ಸ್ (20 ರಿಂದ 25 ಕೆ.ಜಿ) ₹100 ರಿಂದ ₹125 ಇದ್ದು, ಪಟ್ಟಣದಲ್ಲಿ ಭಾನುವಾರ ಸಂತೆ ಮತ್ತು ಮಂಗಳವಾರ ಸಂತೇಮರಹಳ್ಳಿ ಸಂತೆಯಲ್ಲಿ ಕೆಜಿ 1ಕ್ಕೆ ₹5ರಂತೆ ಮಾರಾಟವಾಗಿದೆ. ಇದರಿಂದ ರೈತರು ಮತ್ತು ವ್ಯಾಪಾರಿಗಳಿಗೆ ನಷ್ಟವಾಗಿದೆ ಎಂದು ಕೃಷಿಕ ಕಾವುದವಾಡಿ ರಾಜೇಶ್ ಹೇಳಿದರು.

ADVERTISEMENT

‘ಟೊಮೆಟೊಗೆ ಬೆಲೆ ಇಲ್ಲದೆ ಇರುವುದರಿಂದ ಕೊಳ್ಳುವವರಿಗೂ ನಷ್ಟವಾಗುತ್ತಿದೆ. ಸಾಗಣೆ ವೆಚ್ಚ ಮತ್ತು ಕಡಿಮೆ ಸಮಯದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯ ಲಾಭವನ್ನು ತಗ್ಗಸಿದೆ. 1 ಬಾಕ್ಸ್ ಟೊಮೆಟೊ ₹100 ಇಲ್ಲವೇ ₹120ಕ್ಕೂ ತಂದು ಮಾರಾಟ ಮಾಡಿದರೂ ನಿರ್ವಹಣಾ ವೆಚ್ಚದ ಏರಿಕೆಯಿಂದ ಟೊಮೆಟೊ ಕಟಾವು ಮಾಡಲಾಗದ ಸ್ಥಿತಿ ಇದೆ. ಇದರಿಂದ ಹಣ್ಣು ಗಿಡದಲ್ಲಿ ಕೊಳೆತು ಉದುರುತ್ತಿದೆ’ ಎನ್ನುತ್ತಾರೆ ಬೆಳೆಗಾರರು.

ಹೂಜಿ ನೊಣದ ಭಾದೆ: ಪಕ್ವಗೊಂಡ ಹಣ್ಣಿಗೆ ಕೀಟ ಭಾದೆಯೂ ಸೇರಿಕೊಂಡು ಹಣ್ಣಿನ ಗುಣಮಟ್ಟವನ್ನು ತಗ್ಗಿಸಿದೆ. 1 ಟನ್ ಟೊಮೆಟೊ ಕೊಯ್ಲು ಮಾಡಿದರೆ, 50 ರಿಂದ 100 ಕೆ.ಜಿಗೂ ಹೆಚ್ಚಿನ ಹಣ್ಣು ಕೊಳೆತು ಹೋಗುತ್ತದೆ. ಸಗಟು ವ್ಯಾಪಾರಿಗಳು ಈ ಹಣ್ಣನ್ನು ಪ್ರತ್ಯೇಕಿಸಿ ನಂತರ ಟೊಮೆಟೊಗೆ ಬೆಲೆ ನಿರ್ಧರಿಸುತ್ತಾರೆ. ಬೆಲೆ ಇಲ್ಲದೆ ಇರುವ ಕಾರಣ ಹಾಗೂ ಹಣ್ಣಿನಲ್ಲಿ ಕಾಣಿಸಿಕೊಂಡಿರುವ ಹೂಜಿ ಮತ್ತು ನುಶಿ ಕೀಟದ ನಿರ್ವಹಣೆಗೆ ರೈತರು ಮುಂದಾಗುತ್ತಿಲ್ಲ. ಇದರಿಂದ ಕೃಷಿಕರೂ ನಿರಾಸೆಯಾಗಿದೆ ಎಂದು ವ್ಯಾಪಾರಿ ಚಾಮರಾಜನಗರ ಸೈಯದ್ ಹೇಳುತ್ತಾರೆ.

ಯಳಂದೂರು ತಾಲ್ಲೂಕಿನ ಹೊನ್ನೂರು ಹೊರವಲಯದ ಕಾವುದವಾಡಿ ರಸ್ತೆಯಲ್ಲಿ ರೈತರು ಕೀಟಭಾದೆಗೆ ತುತ್ತಾದ ಟೊಮೆಟೊವನ್ನು ಸುರಿದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.