ADVERTISEMENT

ಟೊಮೆಟೊ ಬೆಲೆ ಸಾರ್ವಕಾಲಿಕ ದಾಖಲೆ

​ಪ್ರಜಾವಾಣಿ ವಾರ್ತೆ
Published 15 ಮೇ 2022, 20:20 IST
Last Updated 15 ಮೇ 2022, 20:20 IST
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟಿನ ನೋಟ
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟಿನ ನೋಟ   

ಕೋಲಾರ: ಟೊಮೆಟೊ ಬೆಲೆ ಗಗನಕ್ಕೇರಿದ್ದು, ಜಿಲ್ಲೆಯ ಮಾರುಕಟ್ಟೆಗಳಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.

ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು 19,930 ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಸದ್ಯ ಹೊರ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿರುವುದರಿಂದ ಟೊಮೆಟೊ ಬೆಳೆ ನಾಶವಾಗಿದ್ದು, ಮಾರುಕಟ್ಟೆಗಳಲ್ಲಿ ಟೊಮೆಟೊ ಆವಕ ಕುಸಿದಿದೆ.

ಇದರಿಂದ ಟೊಮೆಟೊ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. 15 ದಿನಗಳ ಹಿಂದೆ ಮೇ 1ರಂದು ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಸಗಟು ಬೆಲೆ ಕ್ವಿಂಟಾಲ್‌ಗೆ ಕನಿಷ್ಠ ₹ 670 ಮತ್ತು ಗರಿಷ್ಠ ₹ 3,470 ಇತ್ತು. ಭಾನುವಾರ ಟೊಮೆಟೊ ಬೆಲೆ ಕನಿಷ್ಠ ₹ ₹ 2,670 ಹಾಗೂ ಗರಿಷ್ಠ ₹ 5,330ಕ್ಕೆ ಜಿಗಿದಿದೆ. ಸಗಟು ದರಕ್ಕೆ ಅನುಗುಣವಾಗಿ ಚಿಲ್ಲರೆ ಮಾರಾಟ ದರವೂ ಏರಿಕೆಯಾಗಿದೆ.

ADVERTISEMENT

ಕೋವಿಡ್‌–19 ಮತ್ತು ಲಾಕ್‌ಡೌನ್‌ ಕಾರಣಕ್ಕೆ ಹಿಂದಿನ 2 ವರ್ಷವೂ ಸರಕು ಸಾಗಣೆ ವಾಹನ ಸೇವೆಯಲ್ಲಿ ವ್ಯತ್ಯಯವಾಗಿ ಹಾಗೂ ಮಾರುಕಟ್ಟೆ ಇಲ್ಲದೆ ಜಿಲ್ಲೆಯಿಂದ ಹೊರ ರಾಜ್ಯ, ಜಿಲ್ಲೆಗಳಿಗೆ ಟೊಮೆಟೊ ರಫ್ತು ಸ್ಥಗಿತಗೊಂಡಿತ್ತು. ಸ್ಥಳೀಯ ಮಾರುಕಟ್ಟೆಯಲ್ಲಿ ಟೊಮೆಟೊ ಕೇಳುವವರು ಇಲ್ಲದೆ ರೈತರು ರಸ್ತೆಗೆ ಸುರಿದಿದ್ದರು. ಸಾಕಷ್ಟು ರೈತರು ಜಮೀನಿನಲ್ಲೇ ಬೆಳೆ ನಾಶಪಡಿಸಿದ್ದರು.

‘ಈ ಬಾರಿ ಕೋವಿಡ್‌ 4ನೇ ಅಲೆ ಕಾರಣಕ್ಕೆ ಲಾಕ್‌ಡೌನ್‌ ಜಾರಿಯಾದರೆ ಬೆಲೆ ಕುಸಿತವಾಗಬಹುದೆಂಬ ಆತಂಕದಲ್ಲಿ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಲ್ಲಿ ರೈತರು ಟೊಮೆಟೊ ಬೆಳೆಯುವುದನ್ನು ಕಡಿಮೆ ಮಾಡಿದ್ದು, ಟೊಮೆಟೊ ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಇದು ಸಹ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ’ ಎಂದು ಎಪಿಎಂಸಿ ಅಧಿಕಾರಿಗಳು ಹೇಳಿದ್ದಾರೆ.

ಲಕ್ಷಾಂತರ ರೂಪಾಯಿ ವಹಿವಾಟು

ವಿಜಯಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಸ್ಥಳೀಯ ಮಾರುಕಟ್ಟೆಯಲ್ಲಿ 15 ಕೆ.ಜಿ. ಟೊಮೆಟೊ ಕ್ರೇಟ್‌ ₹750 –₹980ವರೆಗೂ ಮಾರಾಟವಾಗುತ್ತಿದೆ. ಕೆಲ ದಿನಗಳ ಹಿಂದೆ ಒಂದು ಕ್ರೇಟ್‌ ಕೇವಲ ₹200ಕ್ಕೆ ಮಾರಾಟವಾಗುತ್ತಿತ್ತು. ಇದರಿಂದ ಚಿಕ್ಕಬಳ್ಳಾಪುರ, ಚಿಂತಾಮಣಿ, ಬಾಗೇಪಲ್ಲಿ ಮಾರುಕಟ್ಟೆಗಳಲ್ಲಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುವಂತಾಗಿದೆ.

ಸರ್ಕಾರ ಜಿಲ್ಲೆಗೊಂದು ಉತ್ಪನ್ನ ಯೋಜನೆಯಡಿಯಲ್ಲಿ ಟೊಮೊಟೊ ಬೆಳೆ ಆಯ್ಕೆ ಮಾಡಿಕೊಂಡಿರುವುದು ಬೆಳೆಗಾರರಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದಂತಾಗಿದೆ ಎನ್ನುತ್ತಾರೆ ಸ್ಥಳೀಯ ರೈತರು.

* ಟೊಮೆಟೊಗೆ ಈಗ ಒಳ್ಳೆಯ ಬೆಲೆ ಬಂದಿರುವ ಖುಷಿಯಿದೆ. ಆದರೆ, ಮಾರುಕಟ್ಟೆಯಲ್ಲಿ ಇನ್ನೂ ಎಷ್ಟು ದಿನ ಈ ಬೆಲೆ ಇರುತ್ತದೆಯೋ ಗೊತ್ತಿಲ್ಲ.

-ಅಶ್ವಥಪ್ಪ, ರೈತ, ವಿಜಯಪುರ

* ಕೆಲ ತಿಂಗಳಿಂದ ದಿಢೀರ್ ಬೆಲೆ ಕುಸಿತವಾದ ಕಾರಣ ಟೊಮೆಟೊಗಳನ್ನು ಚರಂಡಿಗೆ ಸುರಿದೆವು. ಉಚಿತವಾಗಿ ನೀಡಿದೆವು. ಈಗ ಬೆಲೆ ಬಂದಿದೆ. ಆದರೆ, ಈಗ ಗಿಡದಲ್ಲಿ ಹಣ್ಣಿಲ್ಲ.

-ನಾರಾಯಣಸ್ವಾಮಿ, ರೈತ ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.