ADVERTISEMENT

ಪ್ರವಾಸೋದ್ಯಮ ಚೇತರಿಕೆಗೆ 6 ತಿಂಗಳು?

ಪ್ರವಾಸಿ ಕಂಪನಿಗಳಲ್ಲಿ ಮನೆ ಮಾಡಿರುವ ಆತಂಕ

ಪಿಟಿಐ
Published 25 ಮೇ 2020, 20:00 IST
Last Updated 25 ಮೇ 2020, 20:00 IST
   

ಮುಂಬೈ: ಮುಂದಿನ 3 ರಿಂದ 6 ತಿಂಗಳವರೆಗೆ ಪ್ರಯಾಣ ಮತ್ತು ಪ್ರವಾಸೋದ್ಯಮವು ಸಂಪೂರ್ಣವಾಗಿ ಬಾಧಿತವಾಗಿರಲಿದೆ ಎನ್ನುವ ಆತಂಕವು ಈ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶೇ 40 ರಷ್ಟು ಕಂಪನಿಗಳಲ್ಲಿ ಮನೆ ಮಾಡಿದೆ.

ಎರಡು ತಿಂಗಳ ನಂತರ ದೇಶಿ ವಿಮಾನ ಸೇವೆ ಪುನರಾರಂಭಗೊಂಡಿದ್ದರೂ ಪ್ರವಾಸೋದ್ಯಮವು ಕೋವಿಡ್‌ ಪಿಡುಗಿನ ಬಿಕ್ಕಟ್ಟಿನಿಂದ ಹೊರ ಬರಲು ಇನ್ನೂ ಕೆಲ ತಿಂಗಳು ಬೇಕಾಗಬಹುದು ಎನ್ನುವ ಅಭಿಪ್ರಾಯ ಸಾಮಾನ್ಯವಾಗಿದೆ.

ಆರು ತಿಂಗಳವರೆಗೆ ವಹಿವಾಟನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಬಗ್ಗೆ ಶೇ 40ರಷ್ಟು ಕಂಪನಿಗಳು ಮತ್ತು ತಾತ್ಕಾಲಿಕವಾಗಿ ವಹಿವಾಟು ಸ್ಥಗಿತಗೊಳಿಸುವ ಬಗ್ಗೆ ಶೇ 36ರಷ್ಟು ಕಂಪನಿಗಳು ಆಲೋಚಿಸುತ್ತಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.

ADVERTISEMENT

ಉದ್ದಿಮೆಯಲ್ಲಿ ಅನಿಶ್ಚಿತತೆ ಇರುವುದರಿಂದ ಪ್ರಯಾಣ ಸೇವೆ ಒದಗಿಸುವ ಶೇ 38.6ರಷ್ಟು ಕಂಪನಿಗಳು ಉದ್ಯೋಗ ಕಡಿತದ ಬಗ್ಗೆ ಆಲೋಚಿಸುತ್ತಿವೆ. ಈ ಉದ್ದಿಮೆಯನ್ನೇ ನೆಚ್ಚಿಕೊಂಡಿರುವ ಲಕ್ಷಾಂತರ ಜನರು ತೀವ್ರ ನಷ್ಟಕ್ಕೆ ಗುರಿಯಾಗಿದ್ದಾರೆ. ತಮ್ಮ ಉದ್ಯೋಗ ಉಳಿಯುವ ಬಗ್ಗೆ ಅನೇಕರಲ್ಲಿ ಆತಂಕ ಮಡುಗಟ್ಟಿದೆ. ಸರ್ಕಾರವು ಪ್ರವಾಸೋದ್ಯಮ ಪರಿಹಾರ ನಿಧಿ ಸ್ಥಾಪಿಸಲಿದೆ ಎಂದು ಅನೇಕರು ನಿರೀಕ್ಷಿಸಿದ್ದಾರೆ.

‘ಇದೊಂದು ಅಸಾಮಾನ್ಯ ಪರಿಸ್ಥಿತಿಯಾಗಿದ್ದು, ಸಾವಿರಾರು ಕಂಪನಿಗಳ ಉಳಿವಿಗೆ ಸರ್ಕಾರ ಕೆಲಮಟ್ಟಿಗೆ ಪರಿಹಾರ ನೀಡಬೇಕು’ ಎಂದು ಟ್ರಾವೆಲ್‌ ಏಜೆಂಟರ ಸಂಘದ ಅಧ್ಯಕ್ಷ ಜ್ಯೋತಿ ಮಯಲ್‌ ಹೇಳಿದ್ದಾರೆ.

ಶೇ 81ರಷ್ಟು ಕಂಪನಿಗಳು ಶೇ 100ರಷ್ಟು ವರಮಾನ ನಷ್ಟ ಕಂಡಿವೆ. ಶೇ 15ರಷ್ಟು ಕಂಪನಿಗಳ ವರಮಾನ ನಷ್ಟ ಶೇ 75ರಷ್ಟಿದೆ.

‘ದೇಶಿ ವಿಮಾನ ಯಾನ ಆರಂಭಗೊಂಡಿರುವುದು ಮತ್ತು ಜೂನ್‌ನಲ್ಲಿ ವಿದೇಶಿ ವಿಮಾನ ಸೇವೆ ಪುನರಾರಂಭಗೊಳ್ಳಲಿರುವುದು ಉದ್ದಿಮೆಯ ಪಾಲಿಗೆ ಆಶಾಕಿರಣವಾಗಿದೆ’ ಎಂದು ಪ್ರವಾಸೋದ್ಯಮ ಮಂಡಳಿ ಮಹಾಸಂಘದ ಗೌರವ ಕಾರ್ಯದರ್ಶಿ ಸುಭಾಷ್‌ ಗೋಯಲ್‌ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.

‘ಬಾಟ್‌ ಟ್ರಾವೆಲ್‌ ಸೆಂಟಿಮೆಂಟ್‌ ಟ್ರ್ಯಾಕರ್‌‘ ಹೆಸರಿನ ಈ ಸಮೀಕ್ಷೆಯಲ್ಲಿ 2,300ರಷ್ಟು ಉದ್ಯಮಿಗಳು ಮತ್ತು ಕಂಪನಿಯ ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶದಾದ್ಯಂತ 10 ದಿನಗಳವರೆಗೆ ಈ ಸಮೀಕ್ಷೆ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.