ADVERTISEMENT

ಸುರಕ್ಷಿತ ಪ್ರವಾಸಕ್ಕೆ ವಿಮೆ ಸುರಕ್ಷೆ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 19:30 IST
Last Updated 19 ನವೆಂಬರ್ 2019, 19:30 IST
ಪ್ರವಾಸ ವಿಮೆ
ಪ್ರವಾಸ ವಿಮೆ   

ಪ್ರವಾಸಿಗರ ಮೇಲೆ ಅಮೆರಿಕದಲ್ಲಿ ನಡೆದ ಬಂದೂಕು ದಾಳಿಗಳು ಮತ್ತು ಬ್ರಿಟನ್‌ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಜನಾಂಗೀಯ ದಾಳಿ, ಶ್ರೀಲಂಕಾದಲ್ಲಿ ನಡೆದ ಬಾಂಬ್‌ ಸ್ಫೋಟಗಳನ್ನು ನೆನಪಿಸಿಕೊಂಡರೆ, ಹೊರ ದೇಶಗಳಿಗೆ ಪ್ರವಾಸ ಕೈಗೊಳ್ಳುವ ಮುನ್ನ ಸಾಕಷ್ಟು ಎಚ್ಚರವಹಿಸಬೇಕು ಎಂಬ ಸತ್ಯ ಮನವರಿಕೆಯಾಗುತ್ತದೆ.

ಇಂತಹ ಘಟನೆಗಳಿಗೆ ಸಂಬಂಧಿಸಿದ ವರದಿಗಳನ್ನು ಓದಿದವರು, ದೃಶ್ಯಗಳನ್ನು ನೋಡಿದವರು ಭಯಭೀತರಾಗಿ ಪ್ರವಾಸ ಕೈಗೊಳ್ಳುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟ ಉದಾಹರಣೆಗಳೂ ಇವೆ. ಇಷ್ಟವಾದ ಪ್ರದೇಶಗಳನ್ನು ಕಣ್ತುಂಬಿಕೊಳ್ಳಬೇಕೆಂದು ಹಂಬಲಿಸುವವರಿಗೆ ಇಂತಹ ಘಟನೆಗಳು ತುಂಬ ಆಘಾತ ನೀಡುತ್ತವೆ. ಹೀಗಾಗಿ ಎಚ್ಚರಿಕೆ ಅಗತ್ಯ.

2010ರಿಂದ 2017ರ ಅವಧಿಯಲ್ಲಿ ಅಮೆರಿಕದಲ್ಲಿ ಭಾರತ ಸಂಜಾತರ ಸಂಖ್ಯೆ ಶೇ 38ರಷ್ಟು ಹೆಚ್ಚಾಗಿದೆ. ಈ ಬಗ್ಗೆ ವರದಿ ತಯಾರಿಸಿರುವ ಸೌತ್ ಏಷ್ಯನ್ ಅಡ್ವೊಕಸಿ ಗ್ರೂಪ್‌ (ಸಾಲ್ಟ್‌) ಅಮೆರಿಕದ ಒಟ್ಟು ಜನಸಂಖ್ಯೆಯಲ್ಲಿ ಶೇ 1.3ರಷ್ಟು ಮಂದಿ ಭಾರತೀಯರೇ ಇದ್ದಾರೆ ಎಂದು ತಿಳಿಸಿದೆ.

ADVERTISEMENT

ಕರೆಂಟ್ ಪಾಪ್ಯುಲೇಷನ್ ಸರ್ವೆ (ಸಿಪಿಸಿ) ಪ್ರಕಾರ, ಶೇ 51ರಷ್ಟು ಹಿಂದೂಗಳು (ಇವರಲ್ಲಿ ಗುಜರಾತಿ, ಬೆಂಗಾಲಿ ಮತ್ತು ಮಹಾರಾಷ್ಟ್ರದವರೇ ಹೆಚ್ಚು), ಶೇ 18ರಷ್ಟು ಕ್ರೈಸ್ತರು, ಶೇ 10ರಷ್ಟು ಮುಸ್ಲಿಮರು, ಶೇ 5ರಷ್ಟು ಸಿಖ್ಖರು ಸೇರಿದಂತೆ ಒಟ್ಟು 45 ಲಕ್ಷಕ್ಕೂ ಅಧಿಕ ಭಾರತೀಯರು ಅಮೆರಿಕದಲ್ಲಿದ್ದಾರೆ. ಈ ಅಂಕಿ ಅಂಶಗಳನ್ನು ಗಮನಿಸಿದರೆ, ಬಂಧುಗಳನ್ನು ನೋಡಲು, ಪ್ರವಾಸ ಉದ್ದೇಶಕ್ಕೆ ಅಮೆರಿಕಕ್ಕೆ ಭೇಟಿ ನೀಡುವ ಭಾರತೀಯರ ಸಂಖ್ಯೆಯು ದಿನೇ ದಿನೇ ಹೆಚ್ಚಾಗುತ್ತಿದೆ.

ಬೇರೆ ದೇಶಗಳಲ್ಲಿ ಪ್ರವಾಸ ಮಾಡುತ್ತಿದ್ದಾಗ ಅಪಘಾತಗಳು ಸಂಭವಿಸುವ, ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆಗಳು ಇರುತ್ತವೆ. ಲಗೇಜ್‌ ಕಳೆದುಕೊಳ್ಳುವುದು, ವಿಮಾನ ತಪ್ಪಿಸಿಕೊಂಡ ಪ್ರಕರಣಗಳೂ ಇರುತ್ತವೆ. ಇಂತಹ ಹಲವು ಸಮಸ್ಯೆಗಳಿಗೆ ಪ್ರವಾಸ ವಿಮೆ ಉತ್ತಮ ಪರಿಹಾರವಾಗಿರಲಿದೆ.

ಪ್ರವಾಸ ವಿಮೆ ಮಾಡಿಸುವುದರಿಂದ ಸುರಕ್ಷಿತ ಪ್ರಯಾಣದ ಖಾತ್ರಿ ದೊರೆಯುವುದಷ್ಟೇ ಅಲ್ಲ, ಆರ್ಥಿಕ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಯೂ ಇರುವುದಿಲ್ಲ. ಕೃತಕಬುದ್ಧಿಮತ್ತೆ, ಮಷಿನ್ ಲರ್ನಿಂಗ್‌ ಮತ್ತು ಚಾಟ್‌ಬೋಟ್‌ನಂತಹ ನವೀನ ತಂತ್ರಜ್ಞಾನಗಳಿಂದಾಗಿ ಪ್ರವಾಸ ವಿಮೆಯನ್ನು ಸುಲಭವಾಗಿ ಮತ್ತು ಅತಿ ಕಡಿಮೆ ಅವಧಿಯಲ್ಲಿ ಮಾಡಿಸಬಹುದು. ಈ ವಿಮೆಯಿಂದ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನೂ ಪಡೆಯಲು ಅವಕಾಶವಿದೆ.

ವಿದೇಶಗಳಲ್ಲಿನ ವಾತಾವರಣ ಮತ್ತು ಆಹಾರ ಎಲ್ಲರಿಗೂ ಹೊಂದದೇ ಇರಬಹುದು. ಅನೇಕ ಸಂದರ್ಭದಲ್ಲಿ ವಿಭಿನ್ನ ಆಹಾರ ಸೇವನೆಯಿಂದ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಪದೇ ಪದೇ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಪುಟ್ಟ ವೈರಸ್ ಸೋಂಕಿದರೂ ರೋಗಗಳಿಗೆ ಈಡಾಗಬೇಕಾಗುತ್ತದೆ.ತೀವ್ರ ಅಪಘಾತಗಳಿಗೆ ಈಡಾಗಿ ಮೂಳೆಗಳು ಮುರಿದರೆ ಚಿಕಿತ್ಸಾ ವೆಚ್ಚ ಹೆಚ್ಚಾಗಿರುತ್ತದೆ. ಅಭಿವೃದ್ಧಿ ಹೊಂದಿರುವ ಹಲವು ದೇಶಗಳಲ್ಲಿ, ವೈದ್ಯಕೀಯ ಚಿಕಿತ್ಸೆ ದುಬಾರಿ. ಹೀಗಾಗಿ ಆರ್ಥಿಕ ಹೊರೆ ಹೆಚ್ಚಾಗುತ್ತದೆ. ಇನ್ನು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಅಥವಾ ಜೀವ ಉಳಿಯುವುದು ಕಷ್ಟಕರ ಎನ್ನುವ ಸ್ಥಿತಿಯಲ್ಲಿ ಆರ್ಥಿಕ ಹೊರೆ ಹೆಚ್ಚಾಗಿಯೇ ಇರುತ್ತದೆ. ಆರೋಗ್ಯ ಸಮಸ್ಯೆ, ಹಣಕಾಸಿನ ಬಿಕ್ಕಟ್ಟು, ಮಾನಸಿಕ ಒತ್ತಡ ಎಲ್ಲವೂ ಒಮ್ಮೆಲೇ ಕಾಡುತ್ತವೆ.

ದಾಖಲೆಗಳ ಪ್ರಕಾರ ವಿಮಾ ಪರಿಹಾರಕ್ಕಾಗಿ ಅರ್ಜಿ ಪ್ರಕರಣಗಳ ಪೈಕಿ ಶೇ 12ರಷ್ಟು ಪ್ರಕರಣಗಳು ಅಪಘಾತಗಳಿಗೆ ಸಂಬಂಧಿಸಿದ್ದೇ ಆಗಿರುತ್ತವೆ. ವಿಮೆ ಮಾಡಿಸಿದರೆ ಗರಿಷ್ಠ ₹30 ರಿಂದ ₹40 ಲಕ್ಷ ಪಡೆಯಬಹುದು. ವಿದೇಶಿ ಕಂಪನಿಗಳು, ಆಸ್ಪತ್ರೆಗಳೊಂದಿಗೆ ಕೈಜೋಡಿಸಿರುವ ವಿಮಾ ಕಂಪನಿಗಳ ಮೂಲಕ ವಿಮೆ ಮಾಡಿಸಿಕೊಂಡರೆ, ಅನೇಕ ಬಗೆಯಲ್ಲಿ ಪ್ರಯೋಜನಗಳು ಲಭ್ಯ ಇರುತ್ತವೆ.

ಪ್ರವಾಸಕ್ಕೆಂದು ಹೊರಡುವ ಮುನ್ನ ಪೂರ್ವಯೋಜಿತ ಯೋಜನೆ ರೂಪಿಸಿಕೊಳ್ಳದೇ ಇದ್ದರೆ, ಸಮಸ್ಯೆಗಳ ಸುಳಿಗೆ ಸಿಕ್ಕಾಗ ಹಲವು ತೊಂದರೆಗಳು ಎದುರಾಗಬಹುದು. ವಿದೇಶ ಪ್ರಯಾಣದ ವಿಮಾ ಇಳಿಸಿದ್ದರೆ ನಿರ್ಭಯವಾಗಿ ಹೋಗಿ ಬರಬಹುದು.

(ಲೇಖಕ, ಐಸಿಐಸಿಐ ಲೊಂಬಾರ್ಡ್‌ ಜನರಲ್‌ ಇನ್ಶುರೆನ್ಸ್‌ನ ಕ್ಲೇಮ್ಸ್‌ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.