ಟೆಸ್ಲಾ, ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ‘ಭಾರತ ವಿಧಿಸುವ ಸುಂಕ ತಪ್ಪಿಸಿಕೊಳ್ಳಲು ಇಲಾನ್ ಮಸ್ಕ್ ಅವರು ಅಲ್ಲಿಯೇ ಟೆಸ್ಲಾ ವಿದ್ಯುತ್‌ಚಾಲಿತ ಕಾರು ತಯಾರಿಕಾ ಘಟಕ ಸ್ಥಾಪಿಸಿದರೆ, ಅದು ಅಮೆರಿಕಕ್ಕೆ ಮಾಡುವ ಅನ್ಯಾಯವಾಗಿದೆ’ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ಮಸ್ಕ್ ಜೊತೆಗೆ ನೀಡಿರುವ ಜಂಟಿ ಸಂದರ್ಶನದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಮಸ್ಕ್ ಅವರು ಸರ್ಕಾರದ ದಕ್ಷತಾ ಇಲಾಖೆಯ (ಡಿಒಜಿಇ) ನೇತೃತ್ವ ವಹಿಸಿದ್ದಾರೆ.
‘ವಿಶ್ವದ ಪ್ರತಿಯೊಂದು ರಾಷ್ಟ್ರವೂ ನಮ್ಮಿಂದ ಪ್ರಯೋಜನ ಪಡೆಯುತ್ತಿದೆ. ಹಾಗಿದ್ದರೂ ನಮ್ಮ ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಲಾಗುತ್ತಿದೆ. ಭಾರತವೂ ಇದರಿಂದ ಹೊರತಲ್ಲ. ಅತಿಹೆಚ್ಚು ಸುಂಕ ವಿಧಿಸುವ ಆ ರಾಷ್ಟ್ರದಲ್ಲಿ ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಸಾಧ್ಯವೇ’ ಎಂದು ಟ್ರಂಪ್ ಪ್ರಶ್ನಿಸಿದ್ದಾರೆ.
‘ಅಲ್ಲಿ ಟೆಸ್ಲಾ ಘಟಕ ತೆರೆದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಅಮೆರಿಕದ ಪಾಲಿಗೆ ಅದು ನ್ಯಾಯೋಚಿತವಲ್ಲ’ ಎಂದು ಹೇಳಿದ್ದಾರೆ.
‘ಅಮೆರಿಕಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರೊಟ್ಟಿಗೆ ಸುಂಕದ ಬಗ್ಗೆ ಚರ್ಚಿಸಿದ್ದೇನೆ. ನೀವು ನಮ್ಮ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸುತ್ತಿದ್ದೀರಿ. ಅದಕ್ಕೆ ಪ್ರತಿಯಾಗಿ ನಾವು ಸುಂಕ ವಿಧಿಸುತ್ತೇವೆ ಎಂಬ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ’ ಎಂದು ಹೇಳಿದ್ದಾರೆ.
‘ಭಾರತದಲ್ಲಿ ಸುಂಕದ ಪ್ರಮಾಣ ಎಷ್ಟಿದೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ‘ಅತಿಹೆಚ್ಚಿನ ಪ್ರಮಾಣದಲ್ಲಿದೆ’ ಎಂದಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಮಸ್ಕ್, ‘ಆಮದು ವಾಹನಗಳ ಮೇಲೆ ಅಲ್ಲಿ ಶೇ 100ರಷ್ಟು ಸುಂಕ ವಿಧಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.
‘ಭಾರತಕ್ಕಷ್ಟೇ ನಾವು ಸುಂಕ ವಿಧಿಸುತ್ತಿಲ್ಲ. ಎಲ್ಲಾ ದೇಶಗಳಿಗೂ ಈ ನೀತಿ ಅನ್ವಯಿಸಲಿದೆ. ಅವರು (ಮೋದಿ) ವಿಧಿಸುವ ಸುಂಕಕ್ಕೆ ಪ್ರತಿಯಾಗಿ ನಾವು ಅಷ್ಟೇ ಸುಂಕ ವಿಧಿಸುತ್ತೇವೆ’ ಎಂಬ ಟ್ರಂಪ್ ಅವರ ಮಾತಿಗೆ, ‘ಇದು ನ್ಯಾಯೋಚಿತವಾದ ನಿರ್ಧಾರವಾಗಿದೆ’ ಎಂದು ಮಸ್ಕ್ ಧ್ವನಿಗೂಡಿಸಿದ್ದಾರೆ.
ಮುಂಬೈ ಮತ್ತು ನವದೆಹಲಿಯಲ್ಲಿ ಷೋರೂಂ ತೆರೆಯಲು ಸಿದ್ಧತೆ ನಡೆಸಿರುವ ಟೆಸ್ಲಾ, ವಿವಿಧ ಹುದ್ದೆಗಳ ಭರ್ತಿಗೆ ವೆಬ್‌ಸೈಟ್‌ನಲ್ಲಿ ಅರ್ಜಿ ಆಹ್ವಾನಿಸಿದೆ. ಜರ್ಮನಿಯ ತನ್ನ ಘಟಕದಿಂದ ಕಾರುಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಮಾರಾಟ ಮಾಡಲಿದೆ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.