ADVERTISEMENT

ಇರಾನ್‌ ಸುಂಕ: ಭಾರತದ ಮೇಲೆ ಇಲ್ಲ ಪರಿಣಾಮ -ಎಫ್ಐಇಒ

ಪಿಟಿಐ
Published 13 ಜನವರಿ 2026, 14:37 IST
Last Updated 13 ಜನವರಿ 2026, 14:37 IST
   

ನವದೆಹಲಿ: ಇರಾನ್ ಜೊತೆ ವ್ಯಾಪಾರ ವಹಿವಾಟು ನಡೆಸುವ ದೇಶಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ತೀರ್ಮಾನಿಸಿರುವುದು ಭಾರತದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಭಾರತೀಯ ರಫ್ತುದಾರ ಸಂಘಟನೆಗಳ ಒಕ್ಕೂಟ (ಎಫ್ಐಇಒ) ಹೇಳಿದೆ.

ಭಾರತ, ಚೀನಾ ಮತ್ತು ಯುಎಇ ದೇಶಗಳು ಇರಾನ್ ಜೊತೆ ವ್ಯಾಪಾರ ಸಂಬಂಧ ಹೊಂದಿರುವ ಪ್ರಮುಖ ದೇಶಗಳಾಗಿವೆ.

ವಿದೇಶಿ ಆಸ್ತಿಗಳ ನಿಯಂತ್ರಣ ಕಚೇರಿ (ಒಎಫ್‌ಎಸಿ) ಹೇರಿರುವ ನಿರ್ಬಂಧಗಳನ್ನು ಭಾರತದ ಕಂಪನಿಗಳು ಹಾಗೂ ಬ್ಯಾಂಕ್‌ಗಳು ಪೂರ್ಣ ಪ್ರಮಾಣದಲ್ಲಿ ಪಾಲಿಸುತ್ತಿವೆ. ಅವು ಮಾನವೀಯ ನೆರವಿನ ಉದ್ದೇಶದ ವಹಿವಾಟುಗಳು, ಆಹಾರ ಮತ್ತು ಔಷಧ ವಲಯದ ಅನುಮತಿ ಇರುವ ವಹಿವಾಟುಗಳನ್ನು ಅವು ನಡೆಸುತ್ತಿವೆ ಎಂದು ಒಕ್ಕೂಟ ವಿವರಿಸಿದೆ.

ADVERTISEMENT

‘ಹೀಗಾಗಿ, ಭಾರತದ ಮೇಲೆ ಸುಂಕದಿಂದಾಗಿ ಕೆಟ್ಟ ಪರಿಣಾಮ ಉಂಟಾಗಬಹುದು ಎಂದು ಭಾವಿಸಲು ಆಧಾರಗಳು ಇಲ್ಲ’ ಎಂದು ಒಕ್ಕೂಟದ ಮಹಾನಿರ್ದೇಶಕ ಅಜಯ್ ಸಹಾಯ್ ತಿಳಿಸಿದ್ದಾರೆ.

ಭಾರತವು ಧಾನ್ಯಗಳು, ಪಶು ಆಹಾರ, ಚಹಾ, ಕಾಫಿ, ಸಂಬಾರ ಪದಾರ್ಥಗಳು, ಹಣ್ಣು, ತರಕಾರಿ ಮತ್ತು ಔಷಧಗಳನ್ನು ಇರಾನ್‌ಗೆ ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.