ADVERTISEMENT

ಏರ್‌ ಇಂಡಿಯಾ ಸಿಇಒ ಹುದ್ದೆ ತಿರಸ್ಕರಿಸಿದ ಟರ್ಕಿಯ ಇಲ್ಕರ್ ಆಯ್ಚಿ

ಪಿಟಿಐ
Published 1 ಮಾರ್ಚ್ 2022, 9:45 IST
Last Updated 1 ಮಾರ್ಚ್ 2022, 9:45 IST
ಏರ್‌ ಇಂಡಿಯಾ ಸಿಇಒ ಹುದ್ದೆ ತಿರಸ್ಕರಿಸಿದ ಟರ್ಕಿಯ ಇಲ್ಕರ್ ಆಯ್ಚಿ
ಏರ್‌ ಇಂಡಿಯಾ ಸಿಇಒ ಹುದ್ದೆ ತಿರಸ್ಕರಿಸಿದ ಟರ್ಕಿಯ ಇಲ್ಕರ್ ಆಯ್ಚಿ   

ನವದೆಹಲಿ: ಏರ್‌ ಇಂಡಿಯಾದ ಸಿಇಒ ಆಗಿ ಅಧಿಕಾರ ವಹಿಸಲು ಟಾಟಾ ಗ್ರೂಪ್ ನೀಡಿದ್ದ ಅವಕಾಶವನ್ನು ಟರ್ಕಿಷ್ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕರ್ ಆಯ್ಚಿ ತಿರಸ್ಕರಿಸಿದ್ದಾರೆ.

ಏರ್‌ ಇಂಡಿಯಾ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಇಲ್ಕರ್ ಆಯ್ಚಿ ಅವರನ್ನು ನೇಮಕ ಮಾಡಿರುವುದಾಗಿ ಟಾಟಾ ಗ್ರೂಪ್‌ ಫೆಬ್ರುವರಿ 14ರಂದು ಪ್ರಕಟಿಸಿತ್ತು.

ಏರ್‌ ಇಂಡಿಯಾ ಸಿಇಒ ಆಗಿ ಇಲ್ಕರ್ ಆಯ್ಚಿ ಅವರನ್ನು ಆಯ್ಕೆ ಮಾಡಲು ಸರ್ಕಾರವು ಅನುಮತಿ ನೀಡಬಾರದು ಎಂದು ಕಳೆದ ಶುಕ್ರವಾರ ಆರ್‌ಎಸ್‌ಎಸ್‌ ಅಂಗ ಸಂಸ್ಥೆ ಸ್ವದೇಶಿ ಜಾಗರಣ್‌ ಮಂಚ್‌ ಒತ್ತಾಯಿಸಿತ್ತು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಆಯ್ಚಿ ಅವರನ್ನು ನೇಮಕ ಮಾಡಬಾರದು ಎಂದು ಸಂಘಟನೆಯು ಆಗ್ರಹಿಸಿತ್ತು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ADVERTISEMENT

ಭಾರತ ಸರ್ಕಾರವು ಜನವರಿ 27ರಂದು ಏರ್‌ ಇಂಡಿಯಾ ಮಾಲಿಕತ್ವವನ್ನು ಟಾಟಾ ಸನ್ಸ್‌ಗೆ ಹಸ್ತಾಂತರಿಸಿತು. ಏರ್ ಇಂಡಿಯಾ ಉಳಿಸಿಕೊಂಡಿದ್ದ ₹15,300 ಕೋಟಿ ಸಾಲದ ಮೊತ್ತ ಮತ್ತು ₹2,700 ಕೋಟಿ ನಗದು ಸೇರಿ ಒಟ್ಟು ₹18,000 ಕೋಟಿಗೆ ಟಾಟಾ ಸನ್ಸ್‌ ಬಿಡ್‌ ಸಲ್ಲಿಸಿತ್ತು.

ಟರ್ಕಿಷ್‌ ಏರ್‌ಲೈನ್ಸ್‌ನ ಅಧ್ಯಕ್ಷರಾಗಿದ್ದ ಇಲ್ಕರ್ ಆಯ್ಚಿ (51), ಏಪ್ರಿಲ್‌ 1 ಅಥವಾ ಅದಕ್ಕೂ ಮುಂಚೆಯೇ 'ಏರ್ ಇಂಡಿಯಾದ' ಹೊಣೆಗಾರಿಕೆ ವಹಿಸಲಿದ್ದಾರೆ ಎಂದು ಟಾಟಾ ಗ್ರೂಪ್‌ ಪ್ರಕಟಣೆಯಲ್ಲಿ ತಿಳಿಸಿತ್ತು.

ಇಸ್ತಾನ್‌ಬುಲ್‌ನಲ್ಲಿ ಜನಿಸಿದ ಇಲ್ಕ್ಯಾಶ್‌ ಈಸೈ ಅವರು ಬಿಲ್ಕೆಂಟ್‌ ಯೂನಿವರ್ಸಿಟಿಯ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದಲ್ಲಿ ಅಧ್ಯಯನ ನಡೆಸಿದ್ದಾರೆ. 1995ರಲ್ಲಿ ಇಂಗ್ಲೆಂಡ್‌ನ ಲೀಡ್ಸ್‌ ಯೂನಿವರ್ಸಿಟಿಯಲ್ಲಿ ರಾಜ್ಯಶಾಸ್ತ್ರದಲ್ಲಿ ಸಂಶೋಧನೆ ಚಟುವಟಿಕೆಗಳು ಹಾಗೂ 1997ರಲ್ಲಿ ಇಸ್ತಾನ್‌ಬುಲ್‌ನ ಮರ್ಮರಾ ಯೂನಿವರ್ಸಿಟಿಯಲ್ಲಿ ಅಂತರರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.