
ಬೆಂಗಳೂರು: ದೇಶದ ಮುಂಚೂಣಿ ಬ್ಯಾಂಕೇತರ ಹಣಕಾಸು ಕಂಪನಿಗಳ (ಎನ್‌ಬಿಎಫ್‌ಸಿ) ಪೈಕಿ ಒಂದಾಗಿರುವ ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಲಿಮಿಟೆಡ್, ಸೆಪ್ಟೆಂಬರ್ ತ್ರೈಮಾಸಿಕದ ಹಣಕಾಸು ಫಲಿತಾಂಶವನ್ನು ಈಚೆಗೆ ಪ್ರಕಟಿಸಿದ್ದು, ಕಂಪನಿಯ ತೆರಿಗೆ ಪೂರ್ವದ ಲಾಭವು ₹277 ಕೋಟಿ ಆಗಿದೆ.
ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದ ಲಾಭಕ್ಕೆ ಹೋಲಿಸಿದರೆ ಶೇಕಡ 27ರಷ್ಟು ಹೆಚ್ಚು ಎಂದು ಕಂಪನಿ ತಿಳಿಸಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯು ₹204 ಕೋಟಿ ತೆರಿಗೆ ಪೂರ್ವದ ಲಾಭ ಕಂಡಿತ್ತು.
2025–26ನೇ ಹಣಕಾಸು ವರ್ಷದ ಮೊದಲ ಆರು ತಿಂಗಳ ಅವಧಿಯಲ್ಲಿ ಕಂಪನಿಯ ಸಾಲ ನೀಡಿಕೆ ಪ್ರಮಾಣವು ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇಕಡ 17ರಷ್ಟು ಹೆಚ್ಚಳ ಆಗಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕಂಪನಿಯು ಒಟ್ಟು ₹3,481 ಕೋಟಿ ವರಮಾನ ದಾಖಲಿಸಿದೆ. ಇದು ಹಿಂದಿನ ವರ್ಷದ ಇದೇ ತ್ರೈಮಾಸಿಕದ ವರಮಾನಕ್ಕೆ ಹೋಲಿಸಿದರೆ ಶೇ 7ರಷ್ಟು ಹೆಚ್ಚು. ಕಂಪನಿಯು ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ₹385 ಕೋಟಿ ತೆರಿಗೆ ನಂತರದ ಲಾಭ ಕಂಡಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 28ರಷ್ಟು ಹೆಚ್ಚಳ ಆಗಿದೆ.
ಕಂಪನಿಯು ಒಟ್ಟು ವರಮಾನವು 2025–26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ₹1,784 ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಅವಧಿಯ ಒಟ್ಟು ವರಮಾನಕ್ಕೆ ಹೋಲಿಸಿದರೆ ಶೇ 9ರಷ್ಟು ಹೆಚ್ಚು.
ಈ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಕಂಪನಿಯು 25 ಲಕ್ಷಕ್ಕೂ ಹೆಚ್ಚಿನ ಹೊಸ ಗ್ರಾಹಕರಿಗೆ ಸಾಲ ವಿತರಿಸಿದೆ. ಕಂಪನಿಯ ಗ್ರಾಹಕರ ಸಂಖ್ಯೆಯು ಈಗ 2.1 ಕೋಟಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.