
.ಅಲ್ಟ್ರಾಟೆಕ್ ಸಿಮೆಂಟ್
ಅಲ್ಟ್ರಾಟೆಕ್ ಸಿಮೆಂಟ್...
ಸಿಮೆಂಟ್ ತಯಾರಿಕಾ ಕಂಪನಿ ಅಲ್ಟ್ರಾಟೆಕ್ ಸಿಮೆಂಟ್‌ನ ಬೆಲೆ ₹14,200ಕ್ಕೆ ತಲುಪಲಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ. ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ಇಬಿಐಟಿಡಿಎ ಶೇ 35ರಷ್ಟು ಹೆಚ್ಚಳವಾಗಿದ್ದು, ₹3,920 ಕೋಟಿಯಷ್ಟಾಗಿದೆ.
ತೆರಿಗೆ ನಂತರದ ಲಾಭದಲ್ಲಿ (ಪಿಎಟಿ) ಶೇ 32ರಷ್ಟು ಏರಿಕೆಯಾಗಿದ್ದು, ₹1,729 ಕೋಟಿ ಆಗಿದೆ. 2025–26ರಿಂದ 2027–28ರ ಆರ್ಥಿಕ ವರ್ಷದಲ್ಲಿ ಕಂಪನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿಯ (ಇಬಿಐಟಿಡಿಎ) ವಾರ್ಷಿಕ ಸಂಯುಕ್ತ ಬೆಳವಣಿಗೆ ದರವು (ಸಿಎಜಿಆರ್) ಶೇ 18ರಷ್ಟು ಮತ್ತು ತೆರಿಗೆ ನಂತರದ ಲಾಭವು ಶೇ 22ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಅಲ್ಟ್ರಾಟೆಕ್ ಸಿಮೆಂಟ್ ಕಂಪನಿಯ ಷೇರಿನ ಬೆಲೆ ₹12,773.10 ಆಗಿತ್ತು.
ರ್‍ಯಾಡಿಕೊ ಖೇತಾನ್’...
8ಪಿಎಂ ವಿಸ್ಕಿ, ಕಾಂಟೆಸ್ಸಾ ರಮ್‌ನಂತಹ ಜನಪ್ರಿಯ ಮದ್ಯದ ಪೇಯಗಳ ಉತ್ಪಾದನಾ ಕಂಪನಿ ‘ರ್‍ಯಾಡಿಕೊ ಖೇತಾನ್’ 2025–26ನೇ ಹಣಕಾಸು ವರ್ಷದ ಮೂರನೆಯ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದೆ. ಕಂಪನಿಯ ಪ್ರೀಮಿಯಂ ಗುಣಮಟ್ಟದ ಮದ್ಯದ ಪೇಯಗಳ ಮಾರಾಟವು ಶೇ 29ರಷ್ಟು ಹೆಚ್ಚಳ ಕಂಡಿದೆ ಎಂದು ಜೆಎಂ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ. ಕಂಪನಿಯ ಷೇರುಮೌಲ್ಯವು ₹3,790ಕ್ಕೆ ತಲುಪಬಹುದು ಎಂದು ಅದು ಅಂದಾಜಿಸಿದೆ.
ಪ್ರೀಮಿಯಂ ವರ್ಗದ ಮದ್ಯದ ಪೇಯಗಳಿಗೆ ಬೇಡಿಕೆಯು ಚೆನ್ನಾಗಿದೆ. ಹೆಚ್ಚು ವೇಗದ ಬೆಳವಣಿಗೆ ಕಾಣುತ್ತಿರುವ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಮಾರುಕಟ್ಟೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕಂಪನಿ ನೀಡುತ್ತಿದೆ. ಸರ್ಕಾರದ ನಿಯಂತ್ರಣ ಕ್ರಮಗಳು ಜಾಸ್ತಿ ಇರುವ ಮಹಾರಾಷ್ಟ್ರದಲ್ಲಿ ಕಂಪನಿಯ ವಹಿವಾಟು ಕಡಿಮೆ ಇದೆ. ಹೀಗಾಗಿ ರ್‍ಯಾಡಿಕೊ ಖೇತಾನ್ ಕಂಪನಿಯ ವರಮಾನವು ಪ್ರತಿಸ್ಪರ್ಧಿ ಕಂಪನಿಗಳಿಗಿಂತ ಹೆಚ್ಚಿನ ಮಟ್ಟದಲ್ಲಿಯೇ ಉಳಿಯಲಿದೆ ಎಂದು ಜೆಎಂ ಫೈನಾನ್ಶಿಯಲ್ ಹೇಳಿದೆ.
ಕಂಪನಿಯ ಲಾಭದಾಯಕತೆ ಸುಧಾರಿಸುತ್ತಿದೆ, ಸಾಲದ ಪ‍್ರಮಾಣ ಕಡಿಮೆ ಆಗುತ್ತಿದೆ (ಕಂಪನಿಯು 2026–27ನೇ ಹಣಕಾಸು ವರ್ಷದ ವೇಳೆಗೆ ಸಾಲಮುಕ್ತವಾಗುವ ಗುರಿ ಹೊಂದಿದೆ) ಮತ್ತು ಬಂಡವಾಳ ವೆಚ್ಚದ ತೀವ್ರತೆ ಕಡಿಮೆ ಇರುವುದರಿಂದ ಕಂಪನಿಯ ಬಂಡವಾಳದ ಮೇಲಿನ ವರಮಾನವು ಹೆಚ್ಚಾಗುತ್ತದೆ ಎಂದು ಬ್ರೋಕರೇಜ್ ಸಂಸ್ಥೆ ಹೇಳಿದೆ.
ಬುಧವಾರದ ವಹಿವಾಟಿನ ಅಂತ್ಯಕ್ಕೆ ರ್‍ಯಾಡಿಕೊ ಖೇತಾನ್ ಷೇರು ಬೆಲೆಯು ₹2,768 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.