
ನವದೆಹಲಿ: 2017ರಿಂದಲೂ ಪ್ರತಿವರ್ಷ ಫೆಬ್ರುವರಿ 1ರಂದು ಕೇಂದ್ರ ಬಜೆಟ್ (ಆಯವ್ಯಯ) ಮಂಡನೆ ಮಾಡಲಾಗುತ್ತಿದೆ. ಇದೇ ಸಂಪ್ರದಾಯ 2026ರಲ್ಲೂ ಮುಂದುವರಿದರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಫೆಬ್ರುವರಿ 1ರ ಭಾನುವಾರದಂದು ಬಜೆಟ್ ಮಂಡಿಸಬೇಕಾಗುತ್ತದೆ.
ಇದಕ್ಕೆ ಸಂಬಂಧಿಸಿದಂತೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರನ್ನು ಮಾಧ್ಯಮಗಳು ಪ್ರಶ್ನಿಸಿವೆ. ಪ್ರತಿಕ್ರಿಯಿಸಿರುವ ಸಚಿವ, ‘ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು ಈ ಸಂಬಂಧಿಸಿದ ನಿರ್ಧಾರವನ್ನು ಸೂಕ್ತ ಸಮಯದಲ್ಲಿ ತೆಗೆದುಕೊಳ್ಳಲಿದೆ’ ಎಂದಿದ್ದಾರೆ.
ಮತ್ತೊಂದೆಡೆ, ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿ, ‘ಬಜೆಟ್ ಮಂಡನೆಗೆ ನಮಗೆ ನಿಗದಿತವಾದ ದಿನವಿದೆ. ಭಾನುವಾರ ಎಂಬ ಪರಿಕಲ್ಪನೆಯನ್ನು ಬ್ರಿಟಿಷರು ತಂದಿದ್ದು’ ಎಂದಿದ್ದಾರೆ. ಹೀಗಾಗಿ ಫೆ.1ರ ಭಾನುವಾರವೇ ಬಜೆಟ್ ಮಂಡನೆ ಆಗಬಹುದು ಎಂಬ ನಿರೀಕ್ಷೆಯೂ ಇದೆ.
2017ಕ್ಕೂ ಮುಂಚೆ ಫೆಬ್ರುವರಿಯ ಕೊನೆಯ ದಿನದಂದು ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ, ಹೊಸ ಆರ್ಥಿಕ ವರ್ಷದ ಏಪ್ರಿಲ್1ರಿಂದ ಬಜೆಟ್ ಅನುಷ್ಠಾನವಾಗಲಿ ಎಂಬ ಉದ್ದೇಶಕ್ಕಾಗಿ 2017ರಲ್ಲಿ ಅಂದಿನ ವಿತ್ತ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಫೆಬ್ರುವರಿ 1ರಂದು ಬಜೆಟ್ ಮಂಡನೆ ಮಾಡುವ ಸಂಪ್ರದಾಯ ಆರಂಭಿಸಿದರು. ಇದರಿಂದ ಮಾರ್ಚ್ ಅಂತ್ಯದೊಳಗೆ ಬಜೆಟ್‌ಗೆ ಸಂಸತ್ತಿನ ಅನುಮೋದನೆ ಸಿಗುವಂತಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.