ADVERTISEMENT

2026–27ರಲ್ಲಿ ₹53 ಲಕ್ಷ ಕೋಟಿ ವೆಚ್ಚ:ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಸಚಿವೆ

ಪಿಟಿಐ
Published 11 ಫೆಬ್ರುವರಿ 2026, 15:59 IST
Last Updated 11 ಫೆಬ್ರುವರಿ 2026, 15:59 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ನವದೆಹಲಿ: 2026–27ನೇ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಕಡೆಯಿಂದ ಆಗುವ ವೆಚ್ಚಗಳ ಒಟ್ಟು ಮೊತ್ತವು ₹53.47 ಲಕ್ಷ ಕೋಟಿಯಾಗಲಿದೆ ಎಂಬ ಅಂದಾಜು ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಬುಧವಾರ ತಿಳಿಸಿದರು.

ಇದು ಮಾರ್ಚ್‌ 31ಕ್ಕೆ ಕೊನೆಗೊಳ್ಳಲಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿನ ವೆಚ್ಚಕ್ಕೆ ಹೋಲಿಸಿದರೆ ಶೇ 7.7ರಷ್ಟು ಹೆಚ್ಚು.

ADVERTISEMENT

ಪರಿಷ್ಕೃತ ಅಂದಾಜಿನ ಪ್ರಕಾರ ಪ್ರಸಕ್ತ ಹಣಕಾಸು ವರ್ಷದ ಬಜೆಟ್‌ ಗಾತ್ರವು ₹49.64 ಲಕ್ಷ ಕೋಟಿ. ಇದು 2025ರ ಫೆಬ್ರುವರಿಯಲ್ಲಿ ಮಾಡಿದ್ದ ಅಂದಾಜು ಮೊತ್ತವಾದ ₹50.65 ಲಕ್ಷ ಕೋಟಿಗೆ ಹೋಲಿಸಿದರೆ ಕಡಿಮೆ. 2024–25ನೇ ಸಾಲಿನಲ್ಲಿ ₹46.52 ಲಕ್ಷ ಕೋಟಿ ವೆಚ್ಚ ಮಾಡಲಾಗಿತ್ತು.

2026–27ನೇ ಸಾಲಿನ ವೆಚ್ಚಗಳ ಅಂದಾಜು ಕೇಂದ್ರ ಸರ್ಕಾರದ ತೆರಿಗೆ ವರಮಾನಗಳಿಗಿಂತ ಹೆಚ್ಚು ಎಂದು ನಿರ್ಮಲಾ ಅವರು ಬಜೆಟ್‌ ಮೇಲಿನ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ತಿಳಿಸಿದರು. ತೆರಿಗೆ ವರಮಾನದ ಮೂಲಕ ಒಟ್ಟು ₹44.04 ಲಕ್ಷ ಕೋಟಿ ಸಂಗ್ರಹಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಈ ಬಾರಿ ಬಜೆಟ್‌ನಲ್ಲಿ ಬಂಡವಾಳ ವೆಚ್ಚಗಳಿಗೆ ನಿಗದಿ ಮಾಡಿರುವ ₹12.2 ಲಕ್ಷ ಕೋಟಿಯು ಈವರೆಗಿನ ಅತಿಹೆಚ್ಚಿನ ಮೊತ್ತ ಎಂದರು.

2026–27ರಲ್ಲಿ ವಿತ್ತೀಯ ಕೊರತೆಯು ₹16.95 ಲಕ್ಷ ಕೋಟಿ ಆಗಲಿದೆ ಎಂದು ಅಂದಾಜು ಮಾಡಲಾಗಿದೆ. ಮಾರುಕಟ್ಟೆಯಿಂದ ಸಾಲ ಪಡೆಯುವ ಮೂಲಕ ₹11.7 ಲಕ್ಷ ಕೋಟಿ ಸಂಗ್ರಹಿಸಲಾಗುತ್ತದೆ. ಇನ್ನುಳಿದ ಮೊತ್ತವು ಸಣ್ಣ ಉಳಿತಾಯ ಯೋಜನೆಗಳಿಂದ ಹಾಗೂ ಇತರ ಮೂಲಗಳಿಂದ ಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.