ADVERTISEMENT

ಭಾರತದ ಶೇ 85ರಷ್ಟು ಡಿಜಿಟಲ್ ಪಾವತಿ ಯುಪಿಐ ಮೂಲಕ ನಡೆಯುತ್ತಿದೆ: ಆರ್‌ಬಿಐ ಗವರ್ನರ್

ಪಿಟಿಐ
Published 17 ಅಕ್ಟೋಬರ್ 2025, 10:30 IST
Last Updated 17 ಅಕ್ಟೋಬರ್ 2025, 10:30 IST
ಯುಪಿಐ
ಯುಪಿಐ   

ನವದೆಹಲಿ: ಭಾರತದಲ್ಲಿ ಸುಮಾರು ಶೇ 85ರಷ್ಟು ಡಿಜಿಟಲ್ ಪಾವತಿ ವಹಿವಾಟುಗಳು ಯುಪಿಐ ಮೂಲಕ ನಡೆಯುತ್ತಿದ್ದು, ಸಮಗ್ರ, ಸುರಕ್ಷಿತ ಮತ್ತು ಡಿಜಿಟಲ್ ಪಬ್ಲಿಕ್ ಪ್ಲಾಟ್‌ಫಾರ್ಮ್‌ಗಳಿಗೆ (ಡಿಪಿಪಿ) ದೇಶ ಒಂದು ಪ್ರಮುಖ ಉದಾಹರಣೆಯಾಗಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ವಾರ್ಷಿಕ ಸಭೆಯ ಸಂದರ್ಭದಲ್ಲಿ ಆರ್‌ಬಿಐ ಆಯೋಜಿಸಿದ್ದ ‘ಡಿಜಿಟಲ್ ಸಾರ್ವಜನಿಕ ವೇದಿಕೆಗಳ ಮೂಲಕ ಆರ್ಥಿಕ ಸ್ಥಿತಿಸ್ಥಾಪಕತ್ವವನ್ನು ರೂಪಿಸುವ ಕುರಿತಾದ ಉನ್ನತ ಮಟ್ಟದ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಆರ್‌ಬಿಐ ಗವರ್ನರ್, ಭಾರತದ ಡಿಜಿಟಲ್ ವೇದಿಕೆ ವ್ಯವಸ್ಥೆಯ ಕುರಿತು ಡಿಜಿಟಲೀಕರಣ ಮತ್ತು ಆರ್ಥಿಕ ಸೇರ್ಪಡೆಯಲ್ಲಿ ವಿಶೇಷವಾಗಿ ಸರ್ಕಾರಿ ಕಚೇರಿಗಳಲ್ಲಿ ಹಣಕಾಸು ವಹಿವಾಟುಗಳಲ್ಲಿ ಯುಪಿಐ ಪಾತ್ರಗಳ ಕುರಿತು ಸಂಕ್ಷಿಪ್ತ ಅವಲೋಕನ ನೀಡಿದರು.

ADVERTISEMENT

ಸಾರ್ವಜನಿಕ ಮತ್ತು ಖಾಸಗಿ ವಲಯದ ಸಂಸ್ಥೆಗಳು ಈ ವೇದಿಕೆಗಳನ್ನು ಬಳಸಿಕೊಂಡು ಸಾಲ, ಆರೋಗ್ಯ, ಸಾಮಾಜಿಕ ರಕ್ಷಣೆ, ಕೃಷಿ ಸೇರಿದಂತೆ ಇತರೆ ಹಲವಾರು ಕ್ಷೇತ್ರಗನ್ನು ತ್ವರಿತವಾಗಿ ಅಭಿವೃದ್ಧಿಪಡಿಸಬಹುದು. ಪಾವತಿ ವ್ಯವಸ್ಥೆಯಲ್ಲಿ ಯುಪಿಐ ಒಂದು ನಿರ್ಣಾಯಕ ಡಿಜಿಟಲ್ ಸಾರ್ವಜನಿಕ ವೇದಿಕೆಯಾಗಿದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.

UPI ಪಾವತಿಗಳು ಅನೇಕ ಬದಲಾವಣೆಯನ್ನು ತಂದಿವೆ. ವಿಶೇಷವಾಗಿ ಇದು ನಿಖರ ಸಮಯದಲ್ಲಿ ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಪರಿಣಾಮಕಾರಿಯಾಗಿ ಯಾವುದೇ ಬ್ಯಾಂಕುಗಳಿಗೆ ಹಣಕಾಸು ವರ್ಗಾವಣೆ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.

‘ಭಾರತದಲ್ಲಿ ಇಂದು ಸುಮಾರು ಶೇ 85ರಷ್ಟು ಡಿಜಿಟಲ್ ಪಾವತಿ ವಹಿವಾಟುಗಳು UPI ಮೂಲಕ ನಡೆಯುತ್ತಿವೆ. ಪ್ರತೀ ತಿಂಗಳು ಸುಮಾರು ₹2000 ಕೋಟಿ ವಹಿವಾಟು ಯುಪಿಐ ಮೂಲಕ ನಡೆಯುತ್ತದೆ ಎಂದಿದ್ದಾರೆ.

‘ವಸುಧೈವ ಕುಟುಂಬಕಂ' ಅಂದರೆ ಜಗತ್ತು ಒಂದು ಕುಟುಂಬ ಎಂಬ ಭಾವನೆ ಹೊಂದಿರುವ ಭಾರತದಲ್ಲಿ ಡಿಜಿಟಲ್ ಪಬ್ಲಿಕ್ ಪ್ಲಾಟ್‌ಫಾರ್ಮ್‌ ಪ್ರಯೋಜನಗಳು ಇಡೀ ಜಗತ್ತಿಗೆ ಲಭ್ಯವಾಗಬೇಕು ಎಂಬುದು ನಮ್ಮ ಆಸೆ. ಇದು ಭಾರತದ ಜಿ20 ಅಧ್ಯಕ್ಷತೆಯ ವಿಷಯವೂ ಆಗಿತ್ತು. ಅಂತಹ ವೇದಿಕೆಗಳಲ್ಲಿ ಅಂತರರಾಷ್ಟ್ರೀಯ ಸಹಯೋಗಕ್ಕೆ ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.