ADVERTISEMENT

ಯುಪಿಐ ವಹಿವಾಟಿಗೆ ಶುಲ್ಕ ಪ್ರಸ್ತಾವ ಇಲ್ಲ: ಆರ್‌ಬಿಐ ಗವರ್ನರ್‌ ಸ್ಪಷ್ಟ ಮಾತು

ಹಣಕಾಸು ನೀತಿ ಸಮಿತಿಯ ಸಭೆ ನಂತರ ಆರ್‌ಬಿಐ ಗವರ್ನರ್‌ ಸ್ಪಷ್ಟ ಮಾತು

ಪಿಟಿಐ
Published 2 ಅಕ್ಟೋಬರ್ 2025, 13:09 IST
Last Updated 2 ಅಕ್ಟೋಬರ್ 2025, 13:09 IST
ಆರ್‌ಬಿಐ ಲೋಗೊ
ಆರ್‌ಬಿಐ ಲೋಗೊ   

ಮುಂಬೈ: ಯುಪಿಐ ಆಧಾರಿತ ಪಾವತಿಗಳಿಗೆ ಯಾವುದೇ ಬಗೆಯ ಶುಲ್ಕ ವಿಧಿಸುವ ಪ್ರಸ್ತಾವ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

ಕ್ರೆಡಿಟ್‌ ಕಾರ್ಡ್‌ ಬಳಸಿ ಮೊಬೈಲ್‌ ಫೋನ್‌ ಖರೀದಿ ಮಾಡಿದವರು ಇಎಂಐ ಪಾವತಿಯಲ್ಲಿ ವಿಫಲರಾದರೆ, ಅವರ ಮೊಬೈಲ್‌ ಫೋನ್‌ಅನ್ನು ದೂರದಿಂದಲೇ ಲಾಕ್ ಮಾಡುವ ವ್ಯವಸ್ಥೆಯನ್ನು ಚಾಲ್ತಿಗೆ ತರಬೇಕು ಎಂಬ ಪ್ರಸ್ತಾವನೆಯು ಸಾಲ ನೀಡುವ ಕಂಪನಿಗಳಿಂದ ಬಂದಿದೆ. ಇದನ್ನು ಆರ್‌ಬಿಐ ಪರಿಶೀಲಿಸುತ್ತಿದೆ ಎಂದು ಗವರ್ನರ್ ಬುಧವಾರ ಹೇಳಿದ್ದಾರೆ.

ಯುಪಿಐ ಬಳಸಿ ಮಾಡುವ ಪಾವತಿಗಳ ಮೇಲೆ ಶುಲ್ಕ ವಿಧಿಸುವ ಪ್ರಸ್ತಾವ ಇದೆಯೇ ಎಂಬ ಪ್ರಶ್ನೆಯನ್ನು ಗವರ್ನರ್ ಎದುರು, ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ನಂತರ ಬುಧವಾರ ಇರಿಸಲಾಗಿತ್ತು.

ADVERTISEMENT

ಮೊಬೈಲ್‌ ಫೋನ್‌ಗಳನ್ನು ದೂರದಿಂದಲೇ ಲಾಕ್ ಮಾಡುವ ಸೌಲಭ್ಯಕ್ಕೆ ಅನುಮತಿ ನೀಡುವುದರ ಒಳಿತು, ಕೆಡುಕುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ಡೆಪ್ಯುಟಿ ಗವರ್ನರ್ ಎಂ. ರಾಜೇಶ್ವರ ರಾವ್ ತಿಳಿಸಿದ್ದಾರೆ.

‘ಇಲ್ಲಿ ಗ್ರಾಹಕರ ಹಕ್ಕುಗಳು, ಅವರ ಅಗತ್ಯಗಳು, ದತ್ತಾಂಶದ ಸುರಕ್ಷತೆ, ಸಾಲದಾತ ಕಂಪನಿಗಳ ಅಗತ್ಯಗಳು ಇವುಗಳೆಲ್ಲವನ್ನು ಪರಿಶೀಲಿಸಿದಾಗ ಒಳಿತು ಹಾಗೂ ಕೆಡುಕುಗಳು ಇರುವುದು ಗೊತ್ತಾಗುತ್ತದೆ. ಹೀಗಾಗಿ ನಾವು ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದ್ದೇವೆ. ಮುಂದೆ ನಾವು ಇದರ ಬಗ್ಗೆ ನಿಲುವು ತೆಗೆದುಕೊಳ್ಳುತ್ತೇವೆ’ ಎಂದು ರಾವ್ ಅವರು ಹೇಳಿದ್ದಾರೆ.

ರೆಪೊ ದರವನ್ನು ಮುಂದಿನ ದಿನಗಳಲ್ಲಿ ತಗ್ಗಿಸುವ ಸಾಧ್ಯತೆಯ ಕುರಿತಾದ ಪ್ರಶ್ನೆಗೆ ಗವರ್ನರ್ ಮಲ್ಹೋತ್ರಾ ಅವರು, ಹಣದುಬ್ಬರ ಪ್ರಮಾಣವು ಗಣನೀಯವಾಗಿ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಮುಂದೆ ಹಣಕಾಸಿನ ನಿಲುವನ್ನು ಇನ್ನಷ್ಟು ಸಡಿಲಗೊಳಿಸಲು ಅವಕಾಶ ಇದೆ ಎಂದು ಉತ್ತರಿಸಿದ್ದಾರೆ.

Highlights - null

ಷೇರು ಆಧಾರಿತ ಸಾಲದ ಮಿತಿ ಏರಿಕೆ

ಷೇರುಗಳನ್ನು ಅಡಮಾನವಾಗಿ ಇರಿಸಿಕೊಂಡು ನೀಡುವ ಸಾಲದ ಮೊತ್ತವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಆರ್‌ಬಿಐ ಸಿದ್ಧಪಡಿಸಿದೆ. ಷೇರುಗಳನ್ನು ಅಡಮಾನವಾಗಿ ಇರಿಸಿಕೊಂಡು ಬ್ಯಾಂಕ್‌ಗಳು ₹1 ಕೋಟಿವರೆಗೆ ಸಾಲ ನೀಡಬಹುದು ಐಪಿಒಗಳಿಗಾಗಿ ನೀಡುವ ಸಾಲವನ್ನು ವ್ಯಕ್ತಿಗೆ ₹25 ಲಕ್ಷದವರೆಗೆ ಹೆಚ್ಚಿಸಬಹುದು ಎಂಬ ಅಂಶವು ಪ್ರಸ್ತಾವನೆಯಲ್ಲಿ ಇದೆ. ಈ ಪ್ರಸ್ತಾವನೆ ಜಾರಿಗೆ ಬಂದಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ಲಭ್ಯವಾಗಲಿದೆ.

ಈಗಿರುವ ನಿಯಮಗಳ ಪ್ರಕಾರ ಬ್ಯಾಂಕ್‌ಗಳು ಷೇರುಗಳನ್ನು ಅಡಮಾನವಾಗಿ ಇರಿಸಿಕೊಂಡು ₹20 ಲಕ್ಷದವರೆಗೆ ಸಾಲ ನೀಡಬಹುದು. ಐಪಿಒಗಾಗಿ ವ್ಯಕ್ತಿಯೊಬ್ಬನಿಗೆ ₹10 ಲಕ್ಷದವರೆಗೆ ಸಾಲ ಕೊಡಬಹುದು. ಬೆಳವಣಿಗೆ ಅಂದಾಜು ಪರಿಷ್ಕರಣೆ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 6.8ಕ್ಕೆ ಹೆಚ್ಚಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ.

ಅಲ್ಲದೆ ಇಡೀ ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 2.6ಕ್ಕೆ ತಗ್ಗಬಹುದು ಎಂದು ಕೂಡ ಅದು ನಿರೀಕ್ಷಿಸಿದೆ. ಮುಂಗಾರು ಮಳೆಯು ವಾಡಿಕೆಗಿಂತ ಹೆಚ್ಚಾಗಿರುವುದು ಹಾಗೂ ಜಿಎಸ್‌ಟಿ ದರ ಪರಿಷ್ಕರಣೆಯ ಪರಿಣಾಮವಾಗಿ ಹಣದುಬ್ಬರ ಕಡಿಮೆ ಆಗಬಹುದು ಎಂದು ಆರ್‌ಬಿಐ ಅಂದಾಜು ಮಾಡಿದೆ. ಆಗಸ್ಟ್‌ನಲ್ಲಿ ನಡೆದ ಹಣಕಾಸು ನೀತಿ ಸಮಿತಿಯ ಸಭೆಯ ನಂತರ ಆರ್‌ಬಿಐ ಜಿಡಿಪಿ ಬೆಳವಣಿಗೆ ಪ್ರಮಾಣವು ಶೇ 6.5ರಷ್ಟು ಇರಬಹುದು ಎಂದು ಅಂದಾಜು ಮಾಡಿತ್ತು. ಜಿಎಸ್‌ಟಿ ಪರಿಷ್ಕರಣೆಯು ಹಣದುಬ್ಬರ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗಲಿದೆ ಬೇಡಿಕೆ ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ನೆರವಾಗಲಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ. ರೆಪೊ ದರ ಯಥಾಸ್ಥಿತಿ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ರೆಪೊ ದರದಲ್ಲಿ ಯಾವುದೇ ಬದಲಾವಣೆ ತರದೆ ಇರಲು ತೀರ್ಮಾನಿಸಿದೆ. ಅಮೆರಿಕವು ಭಾರತದ ವಿವಿಧ ಸರಕುಗಳ ಮೇಲೆ ವಿಧಿಸಿರುವ ಸುಂಕಗಳ ಪರಿಣಾಮದ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗುವುದಕ್ಕಾಗಿ ಆರ್‌ಬಿಐ ಕಾಯುತ್ತಿದೆ. ಅಲ್ಲದೆ ರೆಪೊ ದರದಲ್ಲಿ ಈವರೆಗೆ ಆಗಿರುವ ಕಡಿತದ ಪರಿಣಾಮ ಹಾಗೂ ಈಚೆಗೆ ಜಾರಿಗೆ ಬಂದಿರುವ ಜಿಎಸ್‌ಟಿ ಪರಿಷ್ಕರಣೆಯ ಪರಿಣಾಮ ಏನಿರಲಿದೆ ಎಂಬುದನ್ನು ಅವಲೋಕಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಆರ್‌ಬಿಐ ನಿರ್ಧರಿಸಿದೆ. ಆದರೆ ಅಮೆರಿಕ ವಿಧಿಸಿರುವ ಸುಂಕದ ಪರಿಣಾಮವಾಗಿ ದೇಶದ ಅರ್ಥ ವ್ಯವಸ್ಥೆಯ ಮೇಲೆ ಏಟು ಬಿದ್ದರೆ ಮುಂದಿನ ದಿನಗಳಲ್ಲಿ ರೆಪೊ ದರವನ್ನು ಇನ್ನಷ್ಟು ತಗ್ಗಿಸಲು ಅವಕಾಶ ಇದೆ ಎಂಬ ಸೂಚನೆಯನ್ನು ಮಲ್ಹೋತ್ರಾ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.