ADVERTISEMENT

ಪೂರ್ವಾನ್ವಯ ತೆರಿಗೆ ಕಾನೂನು ಹಿಂಪಡೆಯುವ ಭಾರತದ ನಿರ್ಧಾರಕ್ಕೆ ಶ್ಲಾಘನೆ

ಪಿಟಿಐ
Published 6 ಆಗಸ್ಟ್ 2021, 6:26 IST
Last Updated 6 ಆಗಸ್ಟ್ 2021, 6:26 IST
   

ವಾಷಿಂಗ್ಟನ್‌: ಪರೋಕ್ಷ ಹಣ ವರ್ಗಾವಣೆಯ ಮೇಲಿನ ತೆರಿಗೆಗೆ ಸಂಬಂಧಿಸಿದ ಪೂರ್ವಾನ್ವಯ ತೆರಿಗೆ ತಿದ್ದುಪಡಿ ಕಾನೂನನ್ನು ಹಿಂತೆಗೆದುಕೊಳ್ಳಲು ಮುಂದಾಗಿರುವ ಭಾರತದ ಕ್ರಮವನ್ನು ಅಮೆರಿಕ– ಭಾರತ ಕಾರ್ಯತಂತ್ರ ಮತ್ತು ಪಾಲುದಾರಿಕೆ ಒಕ್ಕೂಟ (ಯುಎಸ್‌ಐಎಸ್‌ಪಿಎಫ್‌) ಶ್ಲಾಘಿಸಿದೆ.

ಭಾರತದ ಸರ್ಕಾರದ ಹಣಕಾಸು ಸಚಿವಾಲಯ ಗುರುವಾರ ಮಂಡಿಸಿದ ಈ ಮಸೂದೆಯು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ಹೂಡಿಕೆಗಳಿಗೆ ಉತ್ತೇಜನ ನೀಡುತ್ತದೆ. ಜತೆಗೆ, ದೇಶದಲ್ಲಿ ದೀರ್ಘಕಾಲ ಹೂಡಿಕೆ ಮಾಡಿದ ಕಂಪನಿಗಳಿಗೂ ಸಹಾಯವಾಗುತ್ತದೆ. ಈ ವಿಷಯದ ಕುರಿತು ಯುಎಸ್‌ಐಎಸ್‌ಪಿಎಫ್‌ ಹಲವು ವರ್ಷಗಳಿಂದ ಕೆಲಸ ಮಾಡಿರುವುದಕ್ಕೆ ತುಂಬಾ ಹೆಮ್ಮೆ ಎನಿಸುತ್ತಿದೆ ಎಂದು ಒಕ್ಕೂಟ ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷ ಮುಖೇಸ್ ಅಘಿ ಸಂತಸ ವ್ಯಕ್ತಪಡಿಸಿದ್ದಾರೆ.

‘2012ರಲ್ಲಿ ಯುಪಿಎ ಸರ್ಕಾರ ತೆಗೆದುಕೊಂಡ ಪರೋಕ್ಷ ಹಣ ವರ್ಗಾವಣೆಗೆ ಪೂರ್ವಾನ್ವಯ ತೆರಿಗೆ ವಿಧಿಸುವ ನಿರ್ಧಾರದಿಂದ, ಭಾರತಕ್ಕೆ ಕಪ್ಪು ಚುಕ್ಕೆಯಾಗಿತ್ತು.ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಗೌರವಕ್ಕೆ ಧಕ್ಕೆ ತರುವಂತಹ ಇಂಥ ಮಸೂದೆಯನ್ನು ರದ್ದುಗೊಳಿಸಲು ನಿರ್ಧರಿಸಿರುವುದರಿಂದ ನಮಗೆ ಸಂತೋಷವಾಗಿದೆ‘ ಎಂದು ಅಘಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಬುಧವಾರ ಲೋಕಸಭೆಯ ಅಧಿವೇಶನದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ‘ತೆರಿಗೆ ವಿಧಿಸುವ ಕಾನೂನುಗಳ (ತಿದ್ದುಪಡಿ) ಮಸೂದೆ– 2021‘ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.