ಚೀನಾ– ಅಮೆರಿಕ ಧ್ವಜ
ರಾಯಿಟರ್ಸ್ ಚಿತ್ರ
ಬೀಜಿಂಗ್: ಚೀನಾ ಮತ್ತು ಅಮೆರಿಕ ನಡುವಣ ಪ್ರತಿಸುಂಕ ವಿಧಿಸುವ ಪೈಪೋಟಿ ಇನ್ನಷ್ಟು ತೀವ್ರಗೊಂಡಿದೆ. ಅಮೆರಿಕದ ಆಮದು ಉತ್ಪನ್ನಗಳ ಮೇಲೆ ವಿಧಿಸುವ ಪ್ರತಿಸುಂಕವನ್ನು ಶೇ 125ಕ್ಕೆ ಏರಿಸಲಾಗುವುದು ಎಂದು ಚೀನಾ ಶುಕ್ರವಾರ ಪ್ರಕಟಿಸಿದೆ.
ಚೀನಾದ ಈ ಪ್ರತಿರೋಧ ಕ್ರಮ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ಟೋಕಿಯೊ ಮತ್ತು ಸೋಲ್‌ನ ಷೇರು ಮಾರುಕಟ್ಟೆಯಲ್ಲಿ ಷೇರುಗಳ ಮೌಲ್ಯ ಕುಸಿದಿದ್ದರೆ, ಯೂರೋಪಿಯನ್ ಷೇರುಗಳ ಮೌಲ್ಯದಲ್ಲಿ ಭಾರಿ ಪ್ರಮಾಣದ ಏರಿಳಿತ ಕಂಡುಬಂದಿದೆ.
ಚೀನಾದ ದರ ಆಯೋಗ ಮಂಡಳಿಯು, ‘ಶನಿವಾರದಿಂದಲೇ ಜಾರಿಗೆ ಬರುವಂತೆ ಅಮೆರಿಕದ ಉತ್ಪನ್ನಗಳ ಶೇ 125ರಷ್ಟು ಸುಂಕ ವಿಧಿಸಲಾಗುವುದು’ ಎಂದು ಪ್ರಕಟಿಸಿತು.
ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ ಅಮೆರಿಕ ಶೇ 145ರಷ್ಟು ಸುಂಕ ವಿಧಿಸಿತ್ತು. ಈಗ ಚೀನಾ ವಿಧಿಸಿರುವ ಪ್ರಮಾಣವು ಬಹುತೇಕ ಅದಕ್ಕೆ ಸರಿಸಮಾನವಾಗಿದೆ.
‘ಸುಂಕ ಏರಿಕೆ ಪರಿಣಾಮಗಳಿಗೆ ಅಮೆರಿಕವೇ ಹೊಣೆ. ಅಂಕಗಳ ಈ ಆಟ, ಈಗ ನಗೆಪಾಟಲಿನ ಸಂಗತಿಯಾಗಿದೆ’ ಎಂದು ಚೀನಾದ ವಾಣಿಜ್ಯ ಸಚಿವಾಲಯದ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.
‘ಈ ದರವು ಮತ್ತಷ್ಟು ಏರುವ ಸಾಧ್ಯತೆಗಳಿಲ್ಲ. ಏಕೆಂದರೆ, ಆಮದಾಗುವ ಅಮೆರಿಕದ ಉತ್ಪನ್ನಗಳನ್ನು ಚೀನಾದ ಮಾರುಕಟ್ಟೆ ಸ್ವೀಕರಿಸುವ ಸಾಧ್ಯತೆ ಕಡಿಮೆ. ದರ ಮತ್ತೆ ಏರಿದರೆ ಉತ್ಪ್ನನಗಳ ಆಮದು ಸಾಧ್ಯತೆಯೇ ಇರುವುದಿಲ್ಲ’ ಎಂದು ಆರ್ಥಿಕ ಸಚಿವಾಲಯ ಹೇಳಿದೆ.
‘ಟ್ರಂಪ್ ಪ್ರಕಟಿಸಿರುವ ಹೊಸ ಸುಂಕದ ಪ್ರಮಾಣ ಪ್ರಶ್ನಿಸಿ ವಿಶ್ವ ವಾಣಿಜ್ಯ ಸಂಘಟನೆಯಲ್ಲಿ (ಡಬ್ಲ್ಯುಟಿಒ) ಕಾನೂನು ಸಮರ ನಡೆಸಲಾಗುವುದು’ ಎಂದು ಚೀನಾ ಪ್ರಕಟಿಸಿದೆ.
ಸುಂಕ ನೀತಿಗೆ ಉತ್ತಮ ಪ್ರತಿಕ್ರಿಯೆ ಇದೆ. ಅಮೆರಿಕ ಮತ್ತು ಜಗತ್ತು ಉತ್ಸುಕವಾಗಿದೆ. ತ್ವರಿತಗತಿಯಲ್ಲಿ ಪ್ರಗತಿ ಕಾಣುತ್ತಿದೆ.ಡೊನಾಲ್ಟ್ ಟ್ರಂಪ್ ಅಧ್ಯಕ್ಷ ಅಮೆರಿಕ
ಅಮೆರಿಕದ ಉತ್ಪನ್ನಗಳ ವಿಧಿಸಲಾಗಿದ್ದ ಹೆಚ್ಚುವರಿ ಪ್ರತಿಸುಂಕ ಜಾರಿಗೊಳಿಸುವುದನ್ನು 90 ದಿನ ಅವಧಿಗೆ ತಡೆದಿರುವ ಐರೋಪ್ಯ ಒಕ್ಕೂಟದ (ಇ.ಯು) ನಿರ್ಧಾರವು ‘ಜಾಣತನದ ನಡೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಣ್ಣಿಸಿದ್ದಾರೆ. ಆದರೆ 27 ರಾಷ್ಟ್ರಗಳ ಸದಸ್ಯತ್ವವಿರುವ ಇ.ಯು ಒಕ್ಕೂಟದ ಮುಖ್ಯಸ್ಥೆ ಉರ್ಸುಲಾ ವೊನ್ ಡೆರ್ ಲೆಯೆನ್ ಅವರು ‘ಸದ್ಯ ನಾವು ಹಲವು ಪ್ರತಿಕ್ರಿಯಾತ್ಮಕ ಕ್ರಮಗಳಿಂದ ಸಜ್ಜಾಗಿದ್ದೇವೆ. ಟ್ರಂಪ್ ಅವರ ಜೊತೆಗಿನ ಚರ್ಚೆ ವಿಫಲವಾದಲ್ಲಿ ಈ ಕ್ರಮಗಳ ಜಾರಿ ನಿಶ್ಚಿತ’ ಎಂದಿದ್ದಾರೆ.
ಸಿಂಗಪುರ: ಚೀನಾ–ಅಮೆರಿಕ ಸುಂಕ ಸಮರದ ಬಿಸಿ ಇಲ್ಲಿರುವ ಚೀನಾದ ಹೋಟೆಲ್‌ನ ಅಮೆರಿಕದ ಗ್ರಾಹಕರಿಗೂ ತಟ್ಟಿದೆ. ಇಲ್ಲಿರುವ ಚೈನಾಟೌನ್‌ನ ‘ಕ್ಸಿ ಲಾವೊ ಸಾಂಗ್’ ಹೆಸರಿನ ಹೋಟೆಲ್ ‘ಅಮೆರಿಕದ ಗ್ರಾಹಕರಿಗೆ ಶೇ 104 ಸರ್ಚಾರ್ಜ್ ವಿಧಿಸಲಾಗುವುದು’ ಎಂದು ಪ್ರಕಟಿಸಿದೆ. ಚೀನಿ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿದ್ದ ಫಲಕವು ಜಾಲತಾಣದಲ್ಲಿ ಸಾಕಷ್ಟು ಹಂಚಿಕೆಯಾಗಿದ್ದು ಚರ್ಚೆಗೆ ಆಸ್ಪದವಾದ ಹಿಂದೆಯೇ ಹೋಟೆಲ್‌ನ ಆಡಳಿತ ಫಲಕವನ್ನು ತೆಗೆದುಹಾಕಿದೆ ಎಂದು ಚಾನಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.