ADVERTISEMENT

ಭಾರತದ ಮೇಲೆ ಅಮೆರಿಕದ ಕಂಪನಿಗಳ ವಿಶ್ವಾಸ ವೃದ್ಧಿ

ಕೋವಿಡ್‌ ಬಿಕ್ಕಟ್ಟಿನಲ್ಲಿಯೂ ಹರಿದುಬಂತು ₹ 3 ಲಕ್ಷ ಕೋಟಿ ಎಫ್‌ಡಿಐ

ಪಿಟಿಐ
Published 18 ಜುಲೈ 2020, 11:38 IST
Last Updated 18 ಜುಲೈ 2020, 11:38 IST
ಎಫ್‌ಡಿಐ
ಎಫ್‌ಡಿಐ   

ವಾಷಿಂಗ್ಟನ್‌: ಕೋವಿಡ್‌ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಭಾರತದ ಮೇಲೆ ಅಮೆರಿಕದ ಕಂಪನಿಗಳು ಹೊಂದಿರುವ ವಿಶ್ವಾಸ ಹೆಚ್ಚಾಗುತ್ತಲೇ ಇದೆ ಎಂದು ಅಮೆರಿಕ– ಭಾರತ ಕಾರ್ಯತಂತ್ರ ಮತ್ತು ಸಹಭಾಗಿತ್ವ ವೇದಿಕೆಯ (ಯುಎಸ್‌ಐಎಸ್‌ಪಿಎಫ್‌) ಹೇಳಿದೆ.

‘ಕೋವಿಡ್‌ನಿಂದಾಗಿ ಜಗತ್ತೇ ಸಮಸ್ಯೆಗೆ ಸಿಲುಕಿವೆ. ಹೀಗಿದ್ದರೂ, ಈ ವರ್ಷ ಇಲ್ಲಿಯವರೆಗೆ ಅಮೆರಿಕದ ಕಂಪನಿಗಳು ಭಾರತದಲ್ಲಿ ₹ 3 ಲಕ್ಷ ಕೋಟಿ ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆ ಮಾಡಿವೆ. ಇದು ಭಾರತ ಮತ್ತು ಅಲ್ಲಿನ ನಾಯಕತ್ವದ ಬಗ್ಗೆ ಇರುವ ವಿಶ್ವಾಸವನ್ನು ಸೂಚಿಸುತ್ತಿದೆ’ ಎಂದು ವೇದಿಕೆಯ ಅಧ್ಯಕ್ಷ ಮುಕೇಶ್ ಅಘಿ ತಿಳಿಸಿದ್ದಾರೆ.

‘ಇತ್ತೀಚಿನ ವಾರಗಳಲ್ಲಿ ಗೂಗಲ್‌, ಫೇಸ್‌ಬುಕ್‌ ಮತ್ತು ವಾಲ್‌ಮಾರ್ಟ್‌ನಂತಹ ಕಂಪನಿಗಳು ಹೂಡಿಕೆ ಮಾಡಿರುವ ಮೊತ್ತವೇ ₹1.5 ಲಕ್ಷ ಕೋಟಿಗಳಷ್ಟಾಗಿದೆ’ ಎಂದೂ ಅವರು ಹೇಳಿದ್ದಾರೆ.

ADVERTISEMENT

‘ಜಾಗತಿಕ ಹೂಡಿಕೆದಾರರಿಗೆ ಭಾರತವು ಈಗಲೂ ಅತ್ಯಂತ ಭರವಸೆದಾಯಕ ಮಾರುಕಟ್ಟೆಯಾಗಿ ಉಳಿದಿದೆ. ಭಾರತದ ಬಗ್ಗೆ ಹೂಡಿಕೆದಾರರು ಹೊಂದಿರುವ ವಿಶ್ವಾಸವು ಗರಿಷ್ಠ ಮಟ್ಟದಲ್ಲಿದೆ. ಅಮೆರಿಕ ಒಂದೇ ಅಲ್ಲದೆ ಮಧ್ಯಪ್ರಾಚ್ಯದ ದೇಶಗಳಿಂದಲೂ ಹೂಡಿಕೆಯಾಗುತ್ತಿದೆ.

‘ಭಾರತಕ್ಕೆ ಎಫ್‌ಡಿಐ ಆಕರ್ಷಿಸುವ ನಿಟ್ಟಿನಲ್ಲಿ ಈ ವೇದಿಕೆಯು ದೆಹಲಿಯೊಂದಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಅಮೆರಿಕದ ಕಂಪನಿಗಳಿಗೆ ಚೀನಾದಾಚೆಗೆ ತಮ್ಮ ವಹಿವಾಟು ಸ್ಥಾಪಿಸುವಂತೆ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಟ್ರಂಪ್‌ ಆಡಳಿತದ ಮೂರು ವರ್ಷಗಳಿಂದಲೂ ಈ ಕೆಲಸ ನಡೆಯುತ್ತಿದೆಯಾದರೂ, ಕೋವಿಡ್‌ ಸಂದರ್ಭದಲ್ಲಿ ಅದು ವೇಗ ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಳೀಯವಾಗಿ ತಯಾರಿಕೆ ಮಾಡುವ ಆಶಯವು ಉತ್ತಮವಾಗಿದೆ. ಆದರೆ, ಅದನ್ನು ಕಾರ್ಯರೂಪಕ್ಕೆ ತರಲು ಹಲವು ಸವಾಲುಗಳಿವೆ. ಈ ನಿಟ್ಟಿನಲ್ಲಿ ದೇಶದಲ್ಲಿ ತಯಾರಿಕೆಯನ್ನು ಉತ್ತೇಜಿಸುವ ಪ್ರಯತ್ನ ನಡೆಯುತ್ತಿದೆ. ನೀತಿ ನಿರೂಪಕರು ಸರಿಯಾದ ದಿಕ್ಕಿನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.