
ನವದೆಹಲಿ: ಅದಾನಿ ಸಮೂಹದ ಪ್ರಮುಖ ಕಂಪನಿಗಳಲ್ಲಿ ಜಾಗತಿಕ ಮಟ್ಟದ ಕೆಲವು ವಿಮಾ ಕಂಪನಿಗಳು ದೊಡ್ಡ ಮೊತ್ತ ಹೂಡಿಕೆ ಮಾಡಿವೆ ಎಂಬುದನ್ನು ಈಚಿನ ಕೆಲವು ಅಂಕಿ–ಅಂಶಗಳು ಹೇಳುತ್ತಿವೆ. ಅದಾನಿ ಸಮೂಹದಲ್ಲಿ ಎಲ್‌ಐಸಿ ಹೂಡಿಕೆಯು ವಿವಾದಕ್ಕೆ ತಿರುಗಿರುವ ಸಂದರ್ಭದಲ್ಲಿ ಈ ಹೂಡಿಕೆಗಳ ಕುರಿತ ಮಾಹಿತಿ ಮಹತ್ವ ಪಡೆದಿದೆ.
ಅದಾನಿ ಪೋರ್ಟ್ಸ್ ಆ್ಯಂಡ್ ಎಸ್‌ಇಜೆಡ್ ಕಂಪನಿಯಲ್ಲಿ ಎಲ್‌ಐಸಿಯು ಈ ವರ್ಷದ ಜೂನ್‌ನಲ್ಲಿ ₹5 ಸಾವಿರ ಕೋಟಿ ಹೂಡಿಕೆ ಮಾಡಿದ ನಂತರದಲ್ಲಿ ಅದಾನಿ ಸಮೂಹದ ಮುಂಬೈ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್‌ನ (ಎಂಐಎಎಲ್) ಸಾಲಪತ್ರಗಳಲ್ಲಿ ಅಮೆರಿಕ ಮೂಲದ ಅಥೀನ್ ಇನ್ಶೂರೆನ್ಸ್ ಕಂಪನಿಯ ನೇತೃತ್ವದಲ್ಲಿ ಜಾಗತಿಕ ಮಟ್ಟದ ವಿವಿಧ ವಿಮಾ ಕಂಪನಿಗಳು ₹6,650 ಕೋಟಿ ತೊಡಗಿಸಿವೆ.
ಡಿಬಿಎಸ್ ಬ್ಯಾಂಕ್, ಡಿ.ಜೆಡ್. ಬ್ಯಾಂಕ್, ರಾಬೊಬ್ಯಾಂಕ್ ಸೇರಿದಂತೆ ಜಾಗತಿಕ ಮಟ್ಟದ ಕೆಲವು ಬ್ಯಾಂಕ್‌ಗಳಿಂದ ಅದಾನಿ ಗ್ರೀನ್ ಎಜರ್ಜಿ ಕಂಪನಿಯು ₹2,195 ಕೋಟಿ ಸಂಗ್ರಹಿಸಿದೆ.
ಎಸ್ ಆ್ಯಂಡ್ ಪಿ ಗ್ಲೋಬಲ್ ರೇಟಿಂಗ್ಸ್ ಸಂಸ್ಥೆ ಆಗಸ್ಟ್‌ನಲ್ಲಿ ಸಿದ್ಧಪಡಿಸಿರುವ ವರದಿಯೊಂದರ ಪ್ರಕಾರ ಈ ವರ್ಷದ ಮೊದಲಾರ್ಧದಲ್ಲಿ ಅದಾನಿ ಪೋರ್ಟ್ಸ್ ಆ್ಯಂಡ್ ಎಸ್‌ಇಜೆಡ್, ಅದಾನಿ ಗ್ರೀನ್ ಎನರ್ಜಿ, ಅದಾನಿ ಎಂಟರ್‌ಪ್ರೈಸಸ್, ಅದಾನಿ ಎನರ್ಜಿ ಸಲ್ಯೂಷನ್ಸ್ ಕಂಪನಿಗಳು ಒಟ್ಟಾಗಿ ₹87 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲ ಸೌಲಭ್ಯಕ್ಕೆ ಸಹಿ ಹಾಕಿವೆ.
ಅದಾನಿ ಸಮೂಹದಲ್ಲಿ ಹೂಡಿಕೆ ಮಾಡಲು ಜಾಗತಿಕ ಮಟ್ಟದ ಹೂಡಿಕೆದಾರರು ಹಿಂದೇಟು ಹಾಕುತ್ತಿದ್ದ ಸಂದರ್ಭದಲ್ಲಿ ಎಲ್‌ಐಸಿಯು ಸಮೂಹದಲ್ಲಿ ಹೂಡಿಕೆ ಮಾಡುವಂತೆ ಸರ್ಕಾರಿ ಅಧಿಕಾರಿಗಳು ಪ್ರಭಾವ ಬೀರಿದ್ದರು ಎಂದು ಅಮೆರಿಕದ ‘ದಿ ವಾಷಿಂಗ್ಟನ್ ಪೋಸ್ಟ್’ನ ವರದಿಯೊಂದು ಆರೋಪಿಸಿದೆ. ಆದರೆ, ಎಲ್‌ಐಸಿಯ ಹೂಡಿಕೆ ನಿರ್ಧಾರಗಳಲ್ಲಿ ಕೇಂದ್ರ ಸರ್ಕಾರವು ಯಾವತ್ತೂ ಮಧ್ಯಪ್ರವೇಶ ಮಾಡಿಲ್ಲ ಎಂದು ಎಲ್‌ಐಸಿ ಮಾಜಿ ಅಧ್ಯಕ್ಷ ಸಿದ್ಧಾರ್ಥ ಮೊಹಂತಿ ಹೇಳಿದ್ದಾರೆ.
‘ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ಹಣಕಾಸಿನ ವಿಚಾರದ ಬಗ್ಗೆ ಬರೆಯುವುದು ಜೆಫ್ ಬೆಜಾಸ್ ಮತ್ತು ನಾನು ತಲೆತುಂಬ ಕೂದಲು ಹೊಂದುವುದು ಹೇಗೆಂಬುದರ ಬಗ್ಗೆ ಬರೆಯುವಂತೆ ಇದೆ’ ಎಂದು ಅದಾನಿ ಸಮೂಹದ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್ ವ್ಯಂಗ್ಯವಾಡಿದ್ದಾರೆ. ಸಿಂಗ್ ಮತ್ತು ಬೆಜಾಸ್ ಅವರು ಬೊಕ್ಕತಲೆಯವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.